ಉದಯವಾಹಿನಿ, ಕೋಲಾರ :ಶಿಕ್ಷಕರಾಗಿ,ಮುಖ್ಯಶಿಕ್ಷಕರಾಗಿ ಸತತ ೩೯ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವೇಮಗಲ್‌ನ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯಶಿಕ್ಷಕ ವಿ.ವೆಂಕಟೇಶಪ್ಪ ಅವರ ಸೇವೆ ಸ್ಮರಣೀಯವಾಗಿದ್ದು, ಅವರು ಮಕ್ಕಳೊಂದಿಗೆ ಹೊಂದಿದ್ದ ಒಡನಾಟ ಮರೆಯಲಾಗದಂತದ್ದು ಎಂದು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ವೇಮಗಲ್‌ನ ಶಾಲೆಯ ಆವರಣದಲ್ಲಿ ನಿವೃತ್ತರಾದ ವೆಂಕಟೇಶಪ್ಪ ಅವರನ್ನು ಸನ್ಮಾನಿಸಿ ಬಿಳ್ಕೊಟ್ಟು ಅವರು ಮಾತನಾಡುತ್ತಿದ್ದರು.ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು, ಅಂತಹ ಕಾಯಕವನ್ನು ಅತ್ಯಂತ ಪ್ರಾಮಾಅಣಿಕವಾಗಿ ನಿರ್ವಹಿಸಿರುವ ವೆಂಕಟೇಶಪ್ಪ, ಶಾಲೆಯ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ, ಹೊಸದಾಗಿ ಶಿಕ್ಷಕರಾಗುವವರಿಗೆ ಅವರು ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ಶಿಕ್ಷಕ ವೃತ್ತಿ ಮಾತ್ರ ಜೀವನದುದ್ದಕ್ಕೂ ಗುರುತಿಸುವಂತಹದ್ದಾಗಿದೆ, ನಿಮ್ಮ ಶಿಷ್ಯರು ಇಂದು ರಾಜ್ಯ,ದೇಶ,ವಿದೇಶಗಳಲ್ಲಿ ಓದುತ್ತಿದ್ದರೂ ನಿಮ್ಮನ್ನು ಸ್ಮರಿಸದೇ ಇರುವುದಿಲ್ಲ, ಜೀವನದಲ್ಲಿ ಅತ್ಯಂತ ಖುಷಿ ನೀಡುವ ಮತ್ತು ಆತ್ಮತೃಪ್ತಿ ನೀಡುವ ಕೆಲಸ ಇದಾಗಿದೆ ಎಂದು ತಿಳಿಸಿ, ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿದ ವೆಂಕಟೇಶಪ್ಪ ಮಾತನಾಡಿ, ಶಿಕ್ಷಕನಾದವನಿಗೆ ಶಾಲೆಯ ಮನೆ, ವಿದ್ಯಾರ್ಥಿಗಳೇ ಕುಟುಂಬದ ಸದಸ್ಯರು ಎಂದು ನಂಬಿ ಕೆಲಸ ಮಾಡಿದ್ದೇನೆ, ನನ್ನ ೩೯ ವರ್ಷಗಳ ಸೇವೆಯಲ್ಲಿ ಅನೇಕ ಸಾಧಕ ವಿದ್ಯಾರ್ಥಿಗಳನ್ನು ಕಂಡಿದ್ದೇನೆ, ಇಂದು ಅನೇಕರು ಉನ್ನತ ಹುದ್ದೆಗಳಲ್ಲಿ ಇದ್ದು, ಸಮಾಜಕ್ಕೆ ಆಸ್ತಿಯಾಗಿದ್ದಾರೆ, ಅಂತಹ ಸಾಧಕರನ್ನು ದೇಶಕ್ಕೆ ನೀಡಿದ ಹೆಮ್ಮೆ ನನ್ನದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
