ಉದಯವಾಹಿನಿ, ಕೋಲಾರ: ರಕ್ತದಾನ ಅತ್ಯಂತ ಶ್ರೇಷ್ಟವಾದುದು ಮತ್ತು ಮತ್ತೊಂದು ಜೀವ ಉಳಿಸುವ ಪವಿತ್ರ ಕಾರ್ಯ ಎಂದು ನಗರ ಹೊರವಲಯದ ಛತ್ರಕೋಡಿಹಳ್ಳಿಯ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಎಂ.ವಿ.ರಂಗಪ್ಪ ತಿಳಿಸಿ, ಒಂದೇ ದಿನ ೫೦ ಯುನಿಟ್ ರಕ್ತ ಸಂಗ್ರಹವಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿದರು.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಕಾಲೇಜಿನಿಂದ ಆಯೋಜಿಸಿದ್ದ ರಕ್ತದಾನ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ರಕ್ತ ದಾನ ಮಾಡಿ, ಮತ್ತೊಬ್ಬರ ಜೀವ ಉಳಿಸುವ ಪುಣ್ಯ ನಿಮ್ಮದಾಗುತ್ತದೆ ಎಂದ ಅವರು, ರಕ್ತದಾನ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದರು.
ರಕ್ತದಾನದಿಂದ ಉತ್ತಮ ಆರೋಗ್ಯದ ಜತೆಗೆ ಮನುಷ್ಯನ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯ ಜತೆಗೆ ಅನೇಕ ಕಾಯಿಲೆಗಳಿಂದ ಮುಕ್ತಿ ಕಾಣಬಹುದು ಎಂದ ಅವರು, ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಆಕಸ್ಮಿಕ ಅಪಘಾತ, ಶಸ್ತ್ರಚಿಕಿತ್ಸೆ, ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ, ಅನಿಮಿಯಾದಿಂದ ರಕ್ತದ ಅಗತ್ಯ ಕಾಡುತ್ತದೆ, ಅಂತಹ ಸಂದರ್ಭದಲ್ಲಿ ಜನ ರಕ್ತಕ್ಕಾಗಿ ಹುಡುಕಾಟ ನಡೆಸುವುದು ಮತ್ತು ಅವರ ಆತಂಕ ಕಂಡಿದ್ದೇವೆ, ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡಲು ಮುಂದಾದರೆ ದೇಶದಲ್ಲಿ ರಕ್ತದ ಕೊರತೆ ಕಾಡುವುದಿಲ್ಲ ಎಂದರು.
