ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ದಿನೇ ದಿನೇ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆ ವೃದ್ದಿಯಾಗುತ್ತಿದೆ ಎಂಬುದನ್ನು ಇನ್ನಷ್ಟು ಆತಂಕ ಹುಟ್ಟಿಸಿದೆ.
ತಜ್ಞರ ಪ್ರಕಾರ, ತೂಕ ನಷ್ಟ, ಕಫ ಉತ್ಪತ್ತಿ, ಕಫದೊಂದಿಗೆ ರಕ್ತ ಬರುವುದು ಶ್ವಾಸಕೋಶದ ಕ್ಯಾನ್ಸರ್‌ನ ಕೆಲವು ಪ್ರಮುಖ ಲಕ್ಷಣಗಳು. ಕ್ಯಾನ್ಸರ್ ಶ್ವಾಸಕೋಶಗಳಿಂದ ಹರಡಿದರೆ, ಅದು ಯಕೃತ್ತನ್ನು ಸೇರಿ ಕಾಮಾಲೆ ರೋಗಕ್ಕೆ ಕಾರಣವಾಗುತ್ತದೆ, ಅಡ್ರಿನಲ್ ಗ್ರಂಥಿಗಳಿಗೆ ಸೇರಿದರೆ ಅವು ವೈಫಲ್ಯ ಅನುಭವಿಸುತ್ತವೆ. ಇದರಿಂದ ರಕ್ತದೊತ್ತಡ ಕುಸಿತದಂತಹ ತುರ್ತು ಸ್ಥಿತಿಯನ್ನು ತಂದೊಡ್ಡುತ್ತದೆ. ಎಲುಬುಗಳಲ್ಲಿ ನೋವು ಮತ್ತು ಮುರಿತ ಉಂಟಾಗುತ್ತದೆ. ಕ್ಯಾನ್ಸರ್ ಮೆದುಳನ್ನು ತಲುಪಿದಾಗ ಪಾರ್ಶ್ವವಾಯು ಅಥವಾ ಸೆಳವು ಉಂಟಾಗುತ್ತದೆ.
ಕೈಗಾರಿಕೆಗಳು, ಗಣಿಗಾರಿಕೆ ವಲಯಗಳಲ್ಲಿ ಕೆಲಸ ಮಾಡುವಂತಹ ಔದ್ಯೋಗಿಕ ಅಂಶಗಳ ಹೊರತಾಗಿ, ಸಿಗರೆಟ್‌ಗಳ ಸೇವನೆ, ತಂಬಾಕು ಜಗಿಯುವುದು, ಖೇಣಿ, ಹುಕ್ಕಾ, ತಂಬಾಕಿನ ಜತೆಗೆ ವೀಳ್ಯದೆಲೆ ತಿನ್ನುವುದು, ಹಿಮ್ಮುಖ ಧೂಮಪಾನ, ಅಡುಗೆ ಮನೆಯ ಹೊಗೆ ಮತ್ತು ವಾಹನಗಳ ಮಾಲಿನ್ಯ ಮುಂತಾದವು ಶ್ವಾಸಕೋಶದ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಾಗಿವೆ. ಮುಂದಿನ ಕೆಲವು ವರ್ಷಗಳಲ್ಲಿ ತಂಬಾಕು-ಸಂಬಂಧಿ ಮಾರಕ ರೋಗಗಳ ಹೊರೆ ಭಾರತದಲ್ಲಿ ೧೨ ಪ್ರತಿಶತಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನಕ್ಕೆ ಪೂರ್ವಭಾವಿಯಾಗಿ, ನ್ಯೂಬರ್ಗ್ ಸೆಂಟರ್ ಫಾರ್ ಜೀನೋಮಿಕ್ ಮೆಡಿಸಿನ್ ಆಯೋಜಿಸಿದ್ದ ಪ್ಯಾನಲ್‌ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ತಜ್ಞರು’ಶ್ವಾಸಕೋಶದ ಕ್ಯಾನ್ಸರ್ ಪತ್ತೆ- ಎಷ್ಟು ತಡವಾಗಿ? ತಡವಾಗಿಯೇ?’ ಎಂಬುದಕ್ಕೆ ಸಂಬಂಧಿಸಿ ನಡೆಸಿದ ಚರ್ಚೆಯಲ್ಲಿ, ಇತ್ತೀಚೆಗೆ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳನ್ನು ವರದಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಆರಂಭಿಕ ಹಂತಗಳಲ್ಲಿ ಕ್ಯಾನ್ಸರನ್ನು ಕ್ಷಯವೆಂದು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ.
