ಉದಯವಾಹಿನಿ, ಬಿಹಾರ(ಆಂಧ್ರಪ್ರದೇಶ : ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ‘ಒಂದು ದೇಶ ಒಂದೇ ಚುನಾವಣೆ’ ಪ್ರಸ್ತಾವನೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರೆ, ಎನ್ಡಿಎ ಮೈತ್ರಿಕೂಟದ ವೈಎಸ್‌ಆರ್‌ಸಿಪಿ ಬೆಂಬಲ ನೀಡುವ ಮಾತನ್ನಾಡಿದೆ.ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮಾತನಾಡಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಮೋದಿ ಸರ್ಕಾರ ಒಂದೇ ದೇಶ ಒಂದು ಚುನಾವಣೆ ಘೋಷಣೆಗಾಗಿ ಲೋಕಸಭೆ ವಿಶೇಷ ಅಧಿವೇಶನವನ್ನು ಕರೆದಿದೆ. ಮುಂದೆ ‘ಇದು ಒನ್ ನೇಷನ್ ಒನ್ ಲೀಡರ್’, ‘ಒನ್ ನೇಷನ್ ಒನ್ ರಿಲಿಜನ್’ ಕೂಡ ಆಗಬಹುದು ಎಂದು ಆಪಾದಿಸಿದರು.
ಮುಂಬೈನಲ್ಲಿ ನಡೆದ ಇಂಡಿಯಾ ಸಭೆಯಿಂದ ಬಿಜೆಪಿ ಮತ್ತು ಅದರ ಅಂಗ ಪಕ್ಷಗಳು ಬೆದರಿವೆ. ಅದಕ್ಕಾಗಿಯೇ ಲೋಕಸಭೆ ವಿಶೇಷ ಅಧಿವೇಶನವನ್ನು ತುರ್ತಾಗಿ ಕರೆಯಲಾಗಿದೆ. ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸುತ್ತಿದೆ. ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಬಗ್ಗೆ ಈಗಾಗಲೇ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಂತೆಯೇ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಏಕಕಾಲಕ್ಕೆ ಚುನಾವಣೆ ಅನಗತ್ಯ: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಗತ್ಯವಿಲ್ಲ. ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ಎನ್ನುತ್ತಿದೆ, ಮುಂದೆ ಒಂದು ರಾಷ್ಟ್ರ ಒಂದೇ ಧರ್ಮ, ಒಂದು ರಾಷ್ಟ್ರ ಒಂದೇ ನಾಯಕ ಎಂದರೂ ಅಚ್ಚರಿಯಿಲ್ಲ. ಬಿಜೆಪಿ ದೇಶದಲ್ಲಿ ದ್ವೇಷ ಹರಡುತ್ತಿದೆ. ನಾವು ದೇಶದ ಯುವಕರಿಗೆ ಪೆನ್ನು ಕೊಡಬೇಕು ಎಂದು ಬಯಸಿದರೆ, ಬಿಜೆಪಿ ಆಯುಧಗಳನ್ನು ನೀಡಲು ಮುಂದಾಗಿದೆ. ಈ ರೀತಿಯ ರಾಜಕೀಯ ದೇಶದಲ್ಲಿ ತರವಲ್ಲ. ವಿರೋಧ ಪಕ್ಷಗಳು ಸಂವಿಧಾನ ಉಳಿವಿನ ಮೇಲೆ ನಂಬಿಕೆ ಇಟ್ಟಿವೆ. ಸಂವಿಧಾನ ಸುರಕ್ಷಿತವಾಗಿದ್ದರೆ ದೇಶ ಸುರಕ್ಷಿತ ಎಂದು ತೇಜಸ್ವಿ ಯಾದವ್ ಹೇಳಿದರು.
