ಉದಯವಾಹಿನಿ ಶಿಡ್ಲಘಟ್ಟ: ತಲಕಾಯಲಬೆಟ್ಟದ ಯಾತ್ರಾಸ್ಥಳ ಶ್ರೀ ಭೂನೀಳಾ ಶ್ರೀದೇವಿ ಸಮೇತ ವೆಂಕಟರಮಣಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನವಾಗಿದ್ದು, ಇದರ ಖರ್ಚು ವೆಚ್ಚಗಳನ್ನು ಹಾಗೂ ಅಭಿವೃದ್ಧಿಪಡಿಸುವ ಜವಾಬ್ದಾರಿ ತಾಲೂಕು ಆಡಳಿತದಾಗಿರುತ್ತದೆ.ಶ್ರಾವಣ ಮಾಸದ ಮೂರನೇ ಶನಿವಾರದ ಪ್ರಯುಕ್ತ ಶ್ರೀ ಭೂನೀಳ ಶ್ರೀದೇವಿ ಸಮೇತ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇಲ್ಲಿಗೆ ಬರುವಂತಹ ಭಕ್ತಾದಿಗಳ ಬಳಿ ಕಾರು, ದ್ವಿಚಕ್ರ ವಾಹನ ಇನ್ನಿತರೆ ವಾಹನಗಳಿಗೆ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಸುಂಕ ವಸೂಲಿ ಮಾಡುವುದು ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದು, ಮುಜರಾಯಿ ಇಲಾಖೆ ಅಂದರೆ ತಾಲೂಕು ಆಡಳಿತ ಅವರ ಅನುಮತಿ ಇಲ್ಲದೆ ಭಕ್ತಾದಿಗಳಿಂದ ಸುಂಕ ವಸೂಲಿ ಮಾಡುತ್ತಿದ್ದರು. ಇದರ ಬಗ್ಗೆ ವಿಚಾರಿಸಿದಾಗ ನಮಗೆ ಮೇಲಿನವರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸುಂಕ ವಸೂಲಿ ಮಾಡಿ ಎಂದಿದ್ದಾರೆ ನಾವು ಸುಂಕ ವಸೂಲಿ ಮಾಡುತ್ತಿದ್ದೇವೆ ಎಂದು ಸುಂಕ ವಸೂಲಿ ಮಾಡುತ್ತಿರುವವರು  ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿ ಕನಕಮ್ಮ ಅವರನ್ನು ವಿಚಾರಿಸಿದಾಗ ವಸೂಲಿ ಮಾಡುವ ಹಕ್ಕು ನಮಗಿದೆ.  ಏನ್ ಮಾಡೋದು? ಬೇರೆ ದಾರಿನೇ ಇಲ್ಲ ನಮಗೆ. ಪಂಚಾಯತಿಯಲ್ಲಿ ಯಾವುದೇ ಸೋರ್ಸ್ ಇಲ್ಲ ಬೇರೆ ಪಂಚಾಯಿತಿಗಳೆಲ್ಲ ಬೇರೆ ಏನೇನೋ ಇದೆ. ಲೇಔಟ್ ಗಳಿದೆ ಸಂತೆಗಳಿದೆ ಎಲ್ಲ ಇದೆ ನಮ್ ಪಂಚಾಯಿತಿಯಲ್ಲಿ ಏನಿದೆ ನಿಮಗೆ ಗೊತ್ತಿಲ್ವಾ ಹೇಳಿ, ಕಂದಾಯ ವಸೂಲಿಗೆ ಹೋದರೆ ಈಗ ಹೊಡೆಯುತ್ತಾರೆ. ಬೆಳೆ ಇಲ್ಲ ಅನ್ನುತ್ತಾರೆ. ಒಂದು ಸಲ ಮೋಟರ್ ರಿಪೇರಿ ಗೆ ಬಂದರೆ ಎಷ್ಟು ಖರ್ಚಾಗುತ್ತೆ, ನಿಮಗೇನು ಗೊತ್ತು? ನಾವು ದುಡ್ಡು ಕೇಳಿದರೆ ಮಾತ್ರ ಎಲ್ಲರೂ ಬರುತ್ತಾರೆ ಎಂದು ಸಿಟ್ಟಾಗಿ ಮಾತನಾಡುತ್ತಾರೆ. ನಮ್ಮ ಅಧ್ಯಕ್ಷರು ಅಲ್ಲಿದ್ದರೆ ಅವರತ್ರನೆ ಬೈಟ್ ಕೇಳಿ ತಗೊಳ್ಳಿ. ಪಂಚಾಯತಿ ಆಡಳಿತ ನಡೆಸುವವರು ಅವರೇ ಅಧ್ಯಕ್ಷರು. ನಾವು ಬರಿ ಅವರ ಕೈ ಕೆಳಗೆ ಕೆಲಸ ಮಾಡುವವರು ಅಷ್ಟೇ. ತೆರಿಗೆ ಪರಿಷ್ಕರಣೆ ಮಾಡೋದು ಅವರೇ, ತೆರಿಗೆ ಇಷ್ಟು ಹಾಕಬೇಕು ಅನ್ನೋದು ಅವರೇ, ಅವರು ಆರ್ಡರ್ ಮಾಡಿದ್ರೆ ನಾವು ಮಾಡುವುದು ಅಷ್ಟೇ, ನಾವು ಬರೀ ಕಾರ್ಯಾಂಗ ಅಷ್ಟೇ, ಶಾಸಕಾಂಗ ಅವರೇ, ಶಾಸಕಾಂಗ ಏನು ಮಾಡಿದರೆ ಕಾರ್ಯಾಂಗ ಅದನ್ನು ಪಾಲಿಸುತ್ತೇವೆ ಎಂದರು.
ನನ್ನ ಗಮನಕ್ಕೆ ಏನು ಬಂದಿಲ್ಲ ನನ್ನ ಅನುಮತಿಯು ಪಡೆದುಕೊಂಡಿಲ್ಲ ಪಂಚಾಯತ್ ರಾಜ್ ಆಕ್ಟ್ ನಲ್ಲಿ ಸೆಕ್ಷನ್ ನಮೂದಿಸಿ ಪಿಡಿಒ ಅನುಮತಿ ಕೊಟ್ಟಿದ್ದಾರೆ. ಕಾರ್ಯ ನಿರ್ವಾಹಕ ಅವರನ್ನು ಮಾತನಾಡಿ ಕಾನೂನು ಪ್ರಕಾರ ಅವರಿಗೆ ಅನುಮತಿ ಇದಿಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವೆ. ಗ್ರಾಮ ಪಂಚಾಯಿತಿಯವರ ನಿರ್ಧಾರಕ್ಕೆ ಏನಾದರೂ ಇದೆ ಅನ್ನುವುದಾದರೆ ಪರಿಶೀಲಿಸುತ್ತೇನೆ, ಒಂದು ವೇಳೆ ಇಲ್ಲ ಅಂದ್ರೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸುತ್ತೇನೆ. -ಬಿ.ಎನ್ ಸ್ವಾಮಿ. ತಹಶೀಲ್ದಾರ್ ಶಿಡ್ಲಘಟ್ಟ.
ಗ್ರಾಮ ಪಂಚಾಯಿತಿಯಿಂದ ಏನು ವಾಹನಗಳಿಂದ ತೆರಿಗೆ ವಿಧಿಸುವುದಕ್ಕೆ ನನಗೆ ಒಂದು ಮನವಿ ಪತ್ರವನ್ನು ಕಳಿಸಿದ್ದಾರೆ. ನಾನು ಅದನ್ನು ತಹಶೀಲ್ದಾರ್ ರವರಿಗೆ ಕಳಿಸಿದ್ದೇನೆ. ಆದರೆ ನಾವು ಯಾವುದೇ ಅನುಮತಿಯನ್ನು ಕೊಟ್ಟಿಲ್ಲ, ಮೌಖಿಕವಾಗಿ ಆಗಲಿ ಅಥವಾ ಲಿಖಿತವಾಗಿ ಆಗಲಿ ನಾವು ಅನುಮತಿಯನ್ನು ಕೊಟ್ಟಿಲ್ಲ. ಏನು ಗ್ರಾಮ ಪಂಚಾಯಿತಿ ಲಿಮಿಟ್ ಬರುತ್ತೋ ಅವರು ಏನು ಮಾಡಿಕೊಂಡಿದ್ದರು ಅನ್ನುವುದು ನನ್ನ ಗಮನಕ್ಕೆ ಇಲ್ಲ. -ಮುನಿರಾಜು ಕಾರ್ಯನಿರ್ವಹಣಾಧಿಕಾರಿ ಶಿಡ್ಲಘಟ್ಟ
ಒಟ್ಟಾರೆಯಾಗಿ ವಾಹನಗಳಿಗೆ ತೆರಿಗೆ ವಿಧಿಸುವ ಕಾರ್ಯದಲ್ಲಿ ತಲಕಾಯಲ ಬೆಟ್ಟ ಗ್ರಾಮ ಪಂಚಾಯಿತಿಯಿಂದ, ತಾಲೂಕು ದಂಡಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅವರ ಅನುಮತಿ ಇಲ್ಲದೆಯೇ ಭಕ್ತಾದಿಗಳಿಂದ ತೆರಿಗೆ ವಸೂಲಿ ಮಾಡಿರುವುದು ಎಷ್ಟು ಸರಿ ಎಂಬುದು ತಹಸಿಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳೇ ತಿಳಿಸಬೇಕು.

Leave a Reply

Your email address will not be published. Required fields are marked *

error: Content is protected !!