ಉದಯವಾಹಿನಿ,ಸಿರುಗುಪ್ಪ : ತಾಲೂಕಿನ ಬಿ.ಜಿ.ದಿನ್ನಿ ಮತ್ತು ಕೊತ್ತಲಚಿಂತ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲೆಂದು ಕೊತ್ತಲಚಿಂತ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಲಾಗಿದ್ದು ಕಳೆದ ಕೆಲವು ತಿಂಗಳ ಹಿಂದೆ ಕೆರೆಯ ದುರಸ್ತಿಗಾಗಿ ೧ಕೋಟಿ ೯೦ಲಕ್ಷ ಅನುದಾನವಾಗಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆಂದು ಗ್ರಾಮಸ್ಥರು ಆರೋಪಿಸಿದರು.
ಸಮುದಾಯ ಆಧಾರಿತ ಕೆರೆಯ ದುರಸ್ತಿಗಾಗಿ ಬಿಡುಗಡೆಯಾದ ಅನುದಾನದಲ್ಲಿ ನವೀನ ಬಂಡೆಗಳನ್ನು ಜೋಡಿಸದೇ ಹಳೆ ಬಂಡೆಗಳನ್ನು ಹೊಂದಿಸಿದ್ದಾರೆ. ಎರಡೂವರೆ ಕಿಲೋ ಮೀಟರ್ ದೂರದಿಂದ ಪೈಪ್ ಲೈನ್ ಅಳವಡಿಕೆಗಾಗಿ ನೂತನ ಪೈಪ್‌ಲೈನ್ ಕಾಮಗಾರಿಯಿದ್ದರೂ ಕೇವಲ ಅರ್ಧ ಕಿಲೋ ಮೀಟರ್‌ನಷ್ಟೇ ಪೈಪ್ ಅಳವಡಿಕೆ ಮಾಡಲಾಗಿದೆ.
ಹೊಸ ಪೈಪ್ ಲೈನ್‌ನಿಂದ ನೀರು ಬರುತ್ತಿಲ್ಲ, ಕೆರೆಯ ಪಕ್ಕದಲ್ಲಿ ಚಿಕ್ಕ ಹೊಂಡವನ್ನು ನಿರ್ಮಿಸಲಾಗಿದ್ದರೂ ಅದು ಸ್ವಚ್ಛತೆಯಿಲ್ಲದಂತಾಗಿದೆ. ಒಟ್ಟಾಗಿ ಹೇಳುವುದಾದರೆ ನಿರ್ವಹಣೆ ಮತ್ತು ಕಾಮಗಾರಿ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಂಬ0ದಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಇಂತಹ ಅವೈಜ್ಞಾನಿಕ ಮತ್ತು ಅವ್ಯವಹಾರದಿಂದ ಕೂಡಿದ ಕಾಮಗಾರಿಯಿಂದಾಗಿ ಕಳೆದ ಮೂರು ತಿಂಗಳಿಗೂ ಅಧಿಕ ಕಾಲ ಕೆರೆಗೆ ನೀರಿಲ್ಲದಂತಾಗಿ ಎರಡೂ ಗ್ರಾಮಸ್ಥರು ಹೊಲಸಿನಿಂದ ಗಬ್ಬು ನಾರುತ್ತಿರುವ ಹಳ್ಳದ ನೀರು, ಕೊಳವೆ ಬಾವಿಯ ನೀರು ಕುಡಿದು ಚರ್ಮ ತುರಿಕೆ, ಮಂಡಿನೋವು, ಕೀಲುನೋವಿನಂತಹ ರೋಗಗಳಿಂದ ಬಳಲುವಂತಾಗಿತ್ತು.
ಇಂತಹ ಸಮಸ್ಯೆಗೆ ಕಾರಣವಾದ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. 1ಕೋಟಿ 90ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿದ ಕೆರೆಯಲ್ಲಿ ಬಂಡೆಗಳು ಕಿತ್ತು ಹೋಗಿರುವುದೇ ಕಳಪೆ ಕಾಮಗಾರಿಗೆ ನಿದರ್ಶನವೆಂದು ಹೇಳಬಹುದಾಗಿದೆಂದು ಗ್ರಾಮಸ್ಥರಾದ ಅಶ್ವಥರೆಡ್ಡಿ, ಬಿ.ಲಕ್ಷಿö್ಮರೆಡ್ಡಿ, ಕೊರವರ ಮಂಜುನಾಥ, ಲಕ್ಷಿö್ಮಕಾಂತರೆಡ್ಡಿ, ಬಿ.ರಾಘವರೆಡ್ಡಿ ಆರೋಪಿಸಿದರು.
ಅಲ್ಲದೇ ಕಳಪೆ ಕಾಮಗಾರಿ ನಡೆಸಿದವರ ಮೇಲೆ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
