
ಉದಯವಾಹಿನಿ,ಬಾಗೇಪಲ್ಲಿ: ಪಟ್ಟಣದ ಗೂಳೂರು ವೃತ್ತ, ಗೂಳೂರು ರಸ್ತೆ, ಕೊತ್ತಪಲ್ಲಿ ರಸ್ತೆ ಸೇರಿದಂತೆ ವಿವಿಧ ಪ್ರದೇಶದಲ್ಲಿರುವ ಬಹುತೇಖ ರಸ್ತೆಗಳು ಅಲ್ಪ ಪ್ರಮಾಣದ ಮಳೆ ಬಿದ್ದರೂ ಕೆರೆ, ಕುಂಟೆಗಳಾಗುತ್ತಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ವಾಹನ ಚಲಾಯಿಸಲು ಸಾಧ್ಯವಾಗದೇ ಕಂಗಾಲಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ಶಾಪ ಹಾಕುತ್ತಿದ್ದಾರೆ. ಪಟ್ಟಣದಲ್ಲಿ ಸುರಿದಂತಹ ಮಳೆಯಿಂದಾಗಿ ಪಟ್ಟಣದ ಹಲವಾರು ರಸ್ತೆಗಳು ಜಲಾವೃತವಾಗಿದ್ದವು. ಅದರಂತೆ ಬಾಗೇಪಲ್ಲಿ ಪಟ್ಟಣದಿಂದ ಗೂಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಶಾಸಕ ಸುಬ್ಬಾರೆಡ್ಡಿರವರ ಸ್ವಗೃಹದ ಅಣತಿ ದೂರದಲ್ಲೆ ರಸ್ತೆಗಳ ಪರಿಸ್ಥಿತಿ ಇಷ್ಟೊಂದು ಅದ್ವಾನವಾಗಿದ್ದರೆ ಉಳಿದ ರಸ್ತೆಗಳ ಪರಿಸ್ಥಿತಿ ಹೇಗೆ ? ಎಂಬ ಪ್ರಶ್ನೆ ಕಾಡುತ್ತಿದೆ. ಗೂಳೂರು ವೃತ್ತ ಹಾಗೂ ರಸ್ತೆ ಬದಿ ನಿರ್ಮಿಸಿರುವ ಮೋರಿಗಳ ಕಾಮಗಾರಿ ಅವೈಜ್ಞಾನಿಕವಾಗಿದ್ದು, ರಸ್ತೆ ಬದಿಯ ಕಾಲುವೆಗಳ ಬಹುತೇಕ ಪ್ರದೇಶವನ್ನು ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ, ಮತ್ತೊಂದು ಕಡೆ ಗೂಳೂರು ವೃತ್ತದಲ್ಲಿ ಏಕಾಏಕಿ ಸರ್ಕಾರಿ ಕಾಲುವೆಗಳ ಮೇಲೆ ಅಂಗಡಿಗಳನ್ನು ನಿರ್ಮಿಸಿದ್ದಾರೆ. ಬಹುತೇಕ ಚರಂಡಿಗಳು ಹೂಳು ತುಂಬಿದ್ದು, ಮಳೆ ನೀರು ಸರಾಗವಾಗಿ ಹರಿಯದೆ ಕೊಳಚೆ ನೀರಿನ ಕೆರೆಯಂತಾಗಿದೆ. ಇದರ ಜೊತೆಗೆ ಈ ರಸ್ತೆಯಲ್ಲಿ ಗುಂಡಿಗಳೂ ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸವಾರರು ದಿಕ್ಕೆಟ್ಟು ಪರ್ಯಾಯ ರಸ್ತೆಗಾಗಿ ಹುಡುಕಾಟ ನಡೆಸು ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ವರ್ಷಗಳಿಂದ ಈ ರಸ್ತೆ ಹೀಗೆ ಅದ್ವಾನವಾಗಿದೆ. ಮಳೆ ಬಂದರೆ ಕೊಳಚೆ ನೀರು ರಸ್ತೆಯುದ್ದಕ್ಕೂ ತುಂಬುತ್ತೆ, ಇಲ್ಲದಿದ್ದರೆ ಧೂಳನ್ನು ಎಬ್ಬಿಸುತ್ತೆ. ಒಟ್ಟಿನಲ್ಲಿ ಈ ರಸ್ತೆಯಿಂದ ಅವಾಂತರಗಳು ಮಾತ್ರ ತಪ್ಪಿದ್ದಲ್ಲ ಎಂದು ವಾಹನ ಸವಾರ ರಮೇಶ್ ಬೇಸರ ವ್ಯಕ್ತಪಡಿಸಿದರು.
