
ಉದಯವಾಹಿನಿ, ಬೀದರ್ : ಕರ್ನಾಟಕ ಪಂಚಾಯತ್ ಸೀಮಾ ನಿರ್ಣಯ ಆಯೋಗ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ನಿಗದಿಪಡಿಸಿ ವಿಂಗಡಣೆಯ ಪರಿಷ್ಕೃತ ಕರಡು ಪಟ್ಟಿಯನ್ನು ಹೊರಡಿಸಿರುವ ಆಯೋಗದ ಪ್ರಕಟಣೆಯಲ್ಲಿ ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ವಿಸರ್ಜಿಸಿ 13 ಕಿಲೋಮೀಟರ್ ದೂರದ ಮುರ್ಕಿ ಕ್ಷೇತ್ರದಲ್ಲಿ ಸೇರಿದ್ದಲ್ಲದೆ ಮದನೂರ ಗ್ರಾಮ ಪಂಚಾಯಿತಿಯನ್ನು ಸರಿ ಸುಮಾರು 28 – 25 ಕಿಲೋಮೀಟರ್ ದೂರದಲ್ಲಿರುವ ದಾಬಕಾ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಿರುವ ಕ್ರಮದ ವಿರುದ್ದ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮದನೂರ ಗ್ರಾಮ ಪಂಚಾಯತ ಅಧ್ಯಕ್ಷೆ ಪೂಜಾ ಗುಂಡಪ್ಪಾ ಬೇಲ್ಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕರ್ನಾಟಕದಲ್ಲಿ ತಾ.ಪಂ. ಹಾಗೂ ಜಿ.ಪಂ. ಚುನಾವಣೆ ಜರುಗಲಿರುವ ನಿಮಿತ್ತ ಕ್ಷೇತ್ರ ವಿಂಗಡನೆ ಮಾಡಿ ಕರ್ನಾಟಕ ಪಂಚಾಯತ್ ಸೀಮಾ ನಿರ್ಣಯ ಆಯೋಗಕ್ಕೆ ವರದಿ ಸಲ್ಲಿಸಿರುವ ಕಮಲನಗರ ತಹಶೀಲ್ದಾರರು ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ವಿಸರ್ಜಿಸಿ 13 ಕಿಲೋಮೀಟರ್ ದೂರದ ಮುರ್ಕಿ ಕ್ಷೇತ್ರದಲ್ಲಿ ಸೇರಿದ್ದಲ್ಲದೆ ಮದನೂರ ಗ್ರಾಮ ಪಂಚಾಯಿತಿಯನ್ನು ಸರಿ ಸುಮಾರು 28 – 25 ಕಿಲೋಮೀಟರ್ ದೂರದಲ್ಲಿರುವ ದಾಬಕಾ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಿರುವ ಕ್ರಮದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.ಮದನೂರ ಗ್ರಾಮ ಪಂಚಾಯಿತಿ ಕಮಲನಗರ ಪಟ್ಟಣ್ಣದಿಂದ ಕೇವಲ ಐದು ಕಿಲೋಮೀಟರ್ ಅಂತರದಲ್ಲಿದೆ. ನೂತನ ತಾಲೂಕು ಕ್ಷೇತ್ರವಾದ ಕಮಲನಗರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯ್ತಿಗೆ ಸೇರಿಸದೆ ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ರದ್ದುಗೊಳಿಸಿ 13 ಕಿಲೋಮೀಟರ್ ದೂರದಲ್ಲಿರುವ ಮೂರ್ಕಿ ತಾಲೂಕು ಪಂಚಾಯತ್ ಕ್ಷೇತ್ರ ಮತ್ತು 25 -28 ಕಿಲೋಮೀಟರ್ ದೂರದಲ್ಲಿರುವ ಧಾಬಕಾ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮದನೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿರುವ ತಹಶೀಲ್ದಾರರ ನಡೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಅಧಿಕಾರಿ ವರ್ಗ ಮತೊಮ್ಮೆ ಪರಿಶೀಲಿಸಿ ಮದನೂರ ಗ್ರಾಮ ಪಂಚಾಯತಿಯನ್ನು ಬೇರೆ ಕ್ಷೇತ್ರದಲ್ಲಿ ಸೇರಿಸಿರುವ ಪಟ್ಟಿಯಿಂದ ಕೈಬಿಟ್ಟು ಮದನೂರ ತಾಲೂಕು ಪಂಚಾಯತ್ ಕ್ಷೇತ್ರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಕಮಲನಗರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮುಂದುವರಿಸಬೇಕೆಂದು ಅಧ್ಯಕ್ಷೆ ಪೂಜಾ ಆಗ್ರಹಿಸಿದ್ದಾರೆ.ಮದನೂರ ಗ್ರಾಮ ಪಂಚಾಯತ್ ಸಂಪೂರ್ಣ ಕೃಷಿಯಾಧಾರಿತ ಕ್ಷೇತ್ರವಾಗಿದ್ದು, ಒಂದು ವೇಳೆ ಕಮಲನಗರ ಕ್ಷೇತ್ರವಲ್ಲದೆ ಇನ್ಯಾವುದು ಕ್ಷೇತ್ರಕ್ಕೆ ಸೇರಿಸಿದರೆ ಗ್ರಾಮ ಪಂಚಾಯಿತಿಯ ಮದನೂರ ಮತ್ತು ಖತಗಾಂವ ಗ್ರಾಮದ ರೈತಾಪಿ ವರ್ಗ ತೊಂದರೆಗೆ ಸಿಕ್ಕಿಕೊಳ್ಳಲಿದೆ. ಅಲ್ಲದೆ ಮದನೂರ ಪಂಚಾಯಿತಿ ಸಂಪೂರ್ಣ ಕನ್ನಡ ಭಾಷೆ ಮಾತಾಡುವ ಪಂಚಾಯಿತಿ. ಮದನೂರ ಪಂಚಾಯಿತಿಯನ್ನು ಮೂರ್ಕಿ ಮತ್ತು ದಾಬಕಾ ಕ್ಷೇತ್ರಕ್ಕೆ ಸೇರಿಸಿದರೆ ಭಾಷಾ ವ್ಯತ್ಯಾಸವುಂಟಾಗುತ್ತದೆ. ಅಲ್ಲದೆ ದಾಬಕಾ ಮತ್ತು ಮೂರ್ಕಿ ಕ್ಷೇತ್ರದ ಸರಾಸರಿ ಜನರು ಅನ್ಯ ಭಾಷಿಕರಾಗಿದ್ದಾರೆ.ತಹಶೀಲ್ದಾರರು ಮದನೂರ ಪಂಚಾಯಿತಿಯನ್ನು ಮೂರ್ಕಿ ಮತ್ತು ದಾಬಕಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿರುವ ಪಟ್ಟಿಯಿಂದ ಹೆಸರು ಬಿಡದಿದ್ದರೆ, ಕಾನೂನು ಹೋರಾಟಕ್ಕೆ ಮುಂದಾಗುವುದಲ್ಲದೆ, ಉಗ್ರ ಪ್ರತಿಭಟನೆ ಮುಖಾಂತರ ಮುಂಬರುವ ಗ್ರಾಮಸ್ಥರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂಬರುವ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
