ಉದಯವಾಹಿನಿ, : ಇತ್ತೀಚೆಗೆ ಮುಕ್ತಾಯವಾಗಿದ್ದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ʻಅತ್ಯಂತ ಮೂರ್ಖ ತಂಡʼ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಏಡೆನ್ ಮಾರ್ಕ್ರಮ್ ನಾಯಕತ್ವದ ಹರಿಣ ಪಡೆ ಸೂಪರ್-8ರ ಹಂತದಲ್ಲಿ ಮಾಡಿದ ಎಡವಟ್ಟಿನಿಂದ ಭಾರತ ತಂಡ ಚಾಂಪಿಯನ್ ಆಯಿತು ಎಂದು ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸೂಪರ್-8ರಲ್ಲಿ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದ್ದರೆ, ಆಗ ಭಾರತ ತಂಡದ ಸೆಮಿಫೈನಲ್ ಹಾದಿ ಕಠಿಣವಾಗುತ್ತಿತ್ತು, ಏಕೆಂದರೆ ಮೊದಲನೇ ಪಂದ್ಯದಲ್ಲಿ 76 ರನ್‌ಗಳ ಅಂತರದಲ್ಲಿ ಭಾರಿ ಸೋಲು ಅನುಭವಿಸಿದ್ದರಿಂದ ಭಾರತದ ರನ್ ರೇಟ್ ಕುಸಿದಿತ್ತು.
ದಕ್ಷಿಣ ಆಫ್ರಿಕಾ ಎದುರು ಸೂಪರ್-8ರ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಂತರ ಜಿಂಬಾಬೈ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಗೆಲುವುಗಳ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. ಒಂದು ವೇಳೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದ್ದರೆ, ಭಾರತವನ್ನು ಹಿಂದಿಕ್ಕಿ ವಿಂಡೀಸ್ ಉತ್ತಮ ರನ್‌ರೇಟ್ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು. ಮೊದಲನೇ ಗುಂಪಿನಿಂದ ದಕ್ಷಿಣ ಆಫ್ರಿಕಾ ಹಾಗೂ ವಿಂಡೀಸ್ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯುತ್ತಿದ್ದವು.
ಮೊದಲನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ, ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಅನುಭವಿಸಿತ್ತು. ಹಾಗಾಗಿ ಟೂರ್ನಿಯಿಂದ ಹೊರ ನಡೆದಿತ್ತು. ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ 96 ರನ್‌ಗಳಿಂದ ಕಿವೀಸ್ ತಂಡವನ್ನು ಮಣಿಸಿ ಮೂರನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
