
ಉದಯವಾಹಿನಿ ಕೋಲಾರ :- ಕೇಂದ್ರ ಸರಕಾರದ ಒಕ್ಕೂಟ ವ್ಯವಸ್ಥೆಯ ವಿರೋಧಿ ನೀತಿಗಳಿಂದಾಗಿ ರೈತರು, ಸಾಮಾನ್ಯ ಜನರು ಹಾಗೂ ಕಾರ್ಮಿಕ ವರ್ಗವನ್ನು ಶೋಷಣೆಗೆ ಒಳಪಡಿಸಿದ್ದು ಜನತೆಯ ಹಕ್ಕೊತ್ತಾಯಗಳ ಜಾರಿಗೆ ಒತ್ತಾಯಿಸಿ ಸಿಪಿಐಎಂ ಪಕ್ಷದಿಂದ ತಹಶಿಲ್ದಾರ್ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.ದೇಶದಲ್ಲಿ ಕಳೆದ 9 ವರ್ಷಗಳಿಂದ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವು ಪ್ರತಿಯೊಂದು ಹಂತದಲ್ಲೂ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಆಡಳಿತ ನಡೆಸಿದ್ದು ಸಾಮಾನ್ಯ ವರ್ಗವನ್ನು ನಿರ್ಲಕ್ಷ್ಯ ತೋರಿದ್ದಾರೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ದೇಶದ ಆರ್ಥಿಕತೆ ಕುಸಿಯುತ್ತಿದೆ. ಸರ್ಕಾರಿ ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ ದೇಶಾದ್ಯಂತ ಬೆಲೆ ಏರಿಕೆ ನಿಲ್ಲಿಸಿ, ಉದ್ಯೋಗ ಒದಗಿಸಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಸೆ.4 ರಿಂದ 7 ರವರೆಗೆ ಪ್ರಚಾರಾಂದೋಲನ ನಡೆಸಲಾಗಿದೆ ಮೋದಿ ಸರ್ಕಾರ ಜನತೆಯನ್ನು ದಿವಾಳಿ ಮಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ, ಇದರಿಂದ ಜನತೆ ಹೈರಾಣಾಗಿದ್ದು, ಕಳೆದ 5 ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಶೇ 67 ರಷ್ಟು ಹೆಚ್ಚಳವಾಗಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಾಸಾಯನಿಕ ಗೊಬ್ಬರ, ಕೃಷಿ ಉಪಕರಣಗಳು ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಎಲ್ಲಾ ವಸ್ತುಗಳ ಮೇಲೆ ಮನಸೋ ಇಚ್ಚೆಯಂತೆ ವಿಧಿಸುತ್ತಿರುವ ಜಿಎಸ್ಟಿ ತೆರಿಗೆ ಮತ್ತು ಸರ್ಕಾರ ನೀಡುತ್ತಿದ್ದ ಸಹಾಯ ಧನದ ಕಡಿತ ಇವೆಲ್ಲ ದೇಶವನ್ನು ದಿವಾಳಿಯಂಚಿಗೆ ಕೊಂಡೊಯ್ದಿವೆ ಎಂದು ಕಿಡಿಕಾರಿದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ವಿಜಯಕೃಷ್ಣ ಮಾತನಾಡಿ ಕೃಷಿ ರಂಗದಲ್ಲೂ ಉದ್ಯೋಗ ಸೃಷ್ಠಿಯಾಗುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆ ಮಾಡಿ ಉದ್ಯೋಗ ಸೃಷ್ಠಿಸಬೇಕಿದ್ದ ಸರ್ಕಾರ ಎಲ್ಲವನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಧಾರೆ ಎರೆದು ಯುವ ಜನರ ಬದುಕು ಮತ್ತು ಭವಿಷ್ಯವನ್ನು ಕತ್ತಲೆಗೆ ನೂಕಿದೆ ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರ ಸುಮಾರು 4 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುತ್ತಿದೆ. ಅದರಲ್ಲಿ ಕೇವಲ 50 ಸಾವಿರ ಕೋಟಿಗಳನ್ನು ಮಾತ್ರ ರಾಜ್ಯಕ್ಕೆ ವಾಪಸ್ಸು ನೀಡುತ್ತಿದೆ, ಇದು ಅನ್ಯಾಯವಾಗಿದೆ ಕೆಲವು ರಾಜ್ಯಗಳಿಂದ ಬಿಡಿ ಕಾಸು ವಸೂಲಿ ಮಾಡದೆ ಮೂಟೆಗಟ್ಟಲೇ ವಾಪಸ್ ಕೊಡಲಾಗುತ್ತಿದೆ. ಈ ತಾರತಮ್ಯ ನಿವಾರಣೆಯಾಗದೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.ಕೇಂದ್ರ ಸರ್ಕಾರ ಕೂಡಲೇ ಎಲ್ಲಾ ಅಗತ್ಯ ವಸ್ತುಗಳು ಮತ್ತು ಜನರ ಔಷಧಿಗಳ ಬೆಲೆಗಳ ಮೇಲೆ ನಿಯಂತ್ರಣವನ್ನು ಮರು ಸ್ಥಾಪಿಸಬೇಕು ರಾಜ್ಯದ ಅನ್ಯಭಾಗ್ಯ ಯೋಜನೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ನೀಡಬೇಕು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳ ಮೇಲಿನ ತೆರಿಗೆಗಳನ್ನು ಕಡಿತ ಮಾಡಿ ಕೃಷಿ ಹೂಡಿಕೆಗಳಾದ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಉಪಕರಣಗಳ ಮೇಲೆ ಹಾಗೂ ಆಹಾರ ಧಾನ್ಯಗಳಿಗೂ ಮತ್ತು ವಸ್ತುಗಳಿಗೆ ಸಹಾಯಧನ ಒದಗಿಸಬೇಕು ಹಣದುಬ್ಬರ, ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಮತ್ತು ರೈಲ್ವೆಯನ್ನು ಖಾಸಗಿಕರಣ ಮಾಡುವುದನ್ನು ಕೈಬಿಟ್ಟು ಒಕ್ಕೂಟ ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯ ನೇತೃತ್ವವನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ತಾಲೂಕು ಸಮಿತಿ ಸದಸ್ಯರಾದ ವಿ.ನಾರಾಯಣರೆಡ್ಡಿ, ಆಶಾ, ಎಂ ಭೀಮರಾಜ್, ಯಲ್ಲಪ್ಪ, ಸುಶೀಲಾ, ಮುಖಂಡರಾದ ಎಚ್.ಬಿ. ಕೃಷ್ಣಪ್ಪ, ಮೊಹಮ್ಮದ್ ಮುಸ್ತಾಫ್, ಕೃಷ್ಣೇಗೌಡ, ರಾಜೇಂದ್ರ, ಕೆ.ವಿ.ಮಂಜುನಾಥ್, ನಾರಾಯಣಪ್ಪ, ಚಿನ್ನಮ್ಮ, ಆಂಜಿನಮ್ಮ, ರೇಣುಕಾ, ರಾಮಾಂಜಿ, ಮುಂತಾದವರು ಇದ್ದರು.
