ಉದಯವಾಹಿನಿ,ಶಿಡ್ಲಘಟ್ಟ: ತಾಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ಅಕ್ರಮ ಪ್ರವೇಶ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಒತ್ತಾಯ ಮೇರೆಗೆ ಶಾಸಕ ಬಿ.ಎನ್ ರವಿಕುಮಾರ್ ನೇತೃತ್ವದಲ್ಲಿ ತಲಕಾಯಲಬೆಟ್ಟ ಶ್ರೀ ವೆಂಕಟರಮಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಮತ್ತು ರೈತರ ಸಮ್ಮುಖದಲ್ಲಿ ಸಂಧಾನ ಸಭೆ ಸೋಮವಾರ ನಡೆಯಿತು.ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಅರಣ್ಯ ಅಧಿಕಾರಿಗಳು ವಶ ಪಡಿಸಿಕೊಳ್ಳುವುದಲ್ಲದೆ, ಕಾನೂನು ನಮ್ಮ ಕೈಯಲ್ಲಿದೆ ಇದೆ ಎಂದು ರೈತರ ಮೇಲೆ ದೂರು ದಾಖಲು ಮಾಡುತ್ತಿದ್ದಾರೆ. ರೈತರನ್ನು ಪೋಲೀಸ್ ಠಾಣೆಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಿ.ಎನ್. ರವಿಕುಮಾರ್  ಸಂಧಾನ ಸಭೆಯಲ್ಲಿ ಮಾತನಾಡಿ, ಮೀಸಲು ಅರಣ್ಯ ಹಾಗೂ ಡೀಮ್ಡ್ ಅರಣ್ಯ ಯಾವುದೇ ಆಗಿರಬಹುದು,
ರೈತರು ಈಗಾಗಲೇ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ವಶಕ್ಕೆ ತೆಗೆದುಕೊಂಡು ಬೇಲಿ ನಿರ್ಮಿಸಿರುವುದಕ್ಕೆ ಮೊದಲು ಕಡ್ಡಾಯವಾಗಿ ಅರಣ್ಯ ಅಧಿಕಾರಿಗಳು, ತಹಶೀಲ್ದಾರ್ ರವರು ಜಮೀನಿನ ರೈತರಿಗೆ ಮಾಹಿತಿ ಕೊಡಲೇಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಅವರ ಜಂಟಿ ಸರ್ವೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ. ಏಕಾಏಕಿ ಕ್ರಮ ಕೈಗೊಳ್ಳಬೇಡಿ, ರೈತರು ಅಧಿಕಾರಗಳ ಜೊತೆ ಕಾನೂನಿನ ಚೌಕಟ್ಟಿನಲ್ಲಿ ಸೌಹಾರ್ದತೆಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳೋಣ. ಈ ಬಗ್ಗೆ ಮುಂದೆ ಸದನದಲ್ಲಿ ನಾನು ಪ್ರಸ್ತಾಪಿಸುತ್ತೇನೆ ಎಂದರು.ಚಿಕ್ಕಬಳ್ಳಾಪುರ ವಿಭಾಗದ ಎಸಿಎಫ್ ಶ್ರೀನಿವಾಸ್ ಮಾತನಾಡಿ 1935 ರಲ್ಲಿಯೇ ಗುರುತಿಸಿದ ಮೀಸಲು ಅರಣ್ಯದಲ್ಲಿ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಮಾತ್ರವೇ ನಾವು ಬೇಲಿ ನಿರ್ಮಿಸುತ್ತಿದ್ದೇವೆ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಯಾವುದೇ ಕ್ರಮವಹಿಸಿಲ್ಲ. ಶಾಸಕರು ಹೇಳಿದಂತೆ ನಾವು ಇನ್ನು ಮುಂದೆ ಮೀಸಲು ಅರಣ್ಯದಲ್ಲಿ ಸಾಗುವಳಿ ಜಮೀನಿಗೆ ಬೇಲಿ ಹಾಕುವ ಮೊದಲು ತಹಶೀಲ್ದಾರ್  ಹಾಗೂ ರೈತರಿಗೆ ಮಾಹಿತಿ ನೀಡಿ ನಂತರ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದರು. ಡೀಮ್ಡ್ ಫಾರೆಸ್ಟ್ ಜಮೀನು ವಿಷಯವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಸ್ ನೆಡೆಯುತ್ತಿದೆ ರೈತರಿಗೆ ಮಂಜೂರಾಗಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ನ್ಯಾಯಲದಲ್ಲಿ ಇತ್ಯಾರ್ಥವಾಗಿ ನಿಮ್ಮ ಜಮೀನು ನಿಮಗೆ ಸಿಗುತ್ತದೆ, ನಿಮಗೆ ಮಂಜೂರಾಗಿರುವ ಜಮೀನಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಹಶೀಲ್ದಾರ್ ಬಿ.ಎನ್. ಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಶಿವಣ್ಣ, ನಾರಾಯಣಸ್ವಾಮಿ, ಅಶ್ವತ್ಥರೆಡ್ಡಿ, ಕೃಷ್ಣಾರೆಡ್ಡಿ, ನಾರಾಯಣರೆಡ್ಡಿ, ಡಿ.ಸಿ.ರಾಮಚಂದ್ರ, ವೇಣುಗೋಪಾಲ್, ಸೇರಿದಂತೆ ಅನೇಕ ಮುಖಂಡರು‌ ಹಾಗೂ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!