
ಉದಯವಾಹಿನಿ,ಬಂಗಾರಪೇಟೆ: ಎಲೇಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀತುಬನಹಳ್ಳಿ ಗ್ರಾಮದ ಅಂಗನವಾಡಿಯು ಸರ್ಕಾರಿ ಪ್ರಾಯೋಜಿತ ಮತ್ತು ಮಕ್ಕಳ ಆರೈಕೆ ಹಾಗೂ ತಾಯಿ ಆರೈಕೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮ ಮಟ್ಟದಲ್ಲಿ ನಿರ್ವಹಿಸುವ ಸಂಸ್ಥೆ ಯಾಗಿದೆ. ಅಂಗನವಾಡಿ ಕಾರ್ಯಕರ್ತರು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು ಇವರ ಪ್ರಮುಖ ಉದ್ದೇಶವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಮಕ್ಕಳಿಗೆ ಪೌಷ್ಟಿಕಾಂಶಗಳನ್ನು ಒದಗಿಸಲು ಬೇಳೆಕಾಳುಗಳು ಧಾನ್ಯಗಳು ಎಣ್ಣೆ ತರಕಾರಿ ಸಕ್ಕರೆ ಹಾಲು ಬೆಲ್ಲ ಒಳಗೊಂಡಂತೆ ಇನ್ನಿತರ ಪದಾರ್ಥಗಳನ್ನು ಚಾಚು ತಪ್ಪದೇ ಒದಗಿಸುತ್ತದೆ.
* ಮಕ್ಕಳ ಆಹಾರ ಪದಾರ್ಥಗಳಿಗೆ ಕನ್ನ*
ಇತ್ತೀಚಿಗೆ ಬಹುತೇಕ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ಹಾಗೂ ಸಹ ಸಿಬ್ಬಂದಿಗಳು ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರ ಪದಾರ್ಥಗಳಿಗೆ ಕನ್ನ ಹಾಕಿ ಕೊಳ್ಳೆಹೊಡೆಯುವ ಪ್ರಸಂಗಗಳು ಪದೇಪದೇ ಬೆಳಕಿಗೆ ಬರುತ್ತಿದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇರುವಂತೆ ದಾಖಲಾತಿ ಸೃಷ್ಟಿಸಿ ಆಹಾರದ ಧಾನ್ಯಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ, ಮತ್ತೊಂದು ಕಡೆ ಅಂಗನವಾಡಿ ಕಾರ್ಯಕರ್ತರು ಕೇಂದ್ರಕ್ಕೆ ಹಾಜರಾಗದೆ ನಿರಂತರವಾಗಿ ರಜೆಯಲ್ಲಿ ಇರುತ್ತಾರೆ ಯಾರಾದರೂ ಪ್ರಶ್ನಿಸಿದರೆ ಇಂದು ರಜೆಯಲ್ಲಿ ಇದ್ದಾರೆ ಎಂದು ಸಹ ಸಿಬ್ಬಂದಿ ಸಮಜಾಯಿಸಿ ನೀಡುತ್ತಾರೆ ಎಂದು ಪದೇ ಪದೇ ಹಲವು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗಗಳು ಕಣ್ಣಿಗೆ ಕಾಣಿಸಿಗುತ್ತದೆ. ಬಂಗಾರಪೇಟೆ ತಾಲೂಕಿನ ಎಲೆಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀತು ಬನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮೂಟೆಗಟ್ಟಲೆ ಆಹಾರ ಪದಾರ್ಥಗಳನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದು ಗ್ರಾಮಸ್ಥರಿಗೆ ನೇರವಾಗಿ ಸಿಕ್ಕ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮುನಿರಾಜು ರವರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆ ತೀತು ಬನಹಳ್ಳಿ ಕೇಂದ್ರದಿಂದ ಭುವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಆಹಾರ ಪದಾರ್ಥ ಸಾಮಗ್ರಿಗಳನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥರು ಈ ರೀತಿಯಾಗಿ ಮಾಡಿದ್ದಾರೆ ಎಂದು ಕಾರ್ಯಕರ್ತೆ ಸಮಜಾಯಿಸಿ ನೀಡಿದ್ದಾರೆ, ವಾಸ್ತವಿಕವಾಗಿ ಯಾವುದೇ ಆಹಾರ ಪದಾರ್ಥಗಳನ್ನು ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಸಾಗಿಸಬೇಕಾದರೆ ಗ್ರಾಮಸ್ಥರು ಅಥವಾ ಸಮಿತಿಗೆ ತಿಳಿಸಬೇಕು. ಪ್ರಸ್ತುತ ಸದರಿ ಕಾರ್ಯಕರ್ತೆಯನ್ನು ಅಮಾನತುಗೊಳಿಸಿದ್ದು ತನಿಖೆಯನ್ನು ನಡೆಸಲಾಗುವುದು ಹಾಗೂ ಜಿಲ್ಲಾಧ್ಯಂತ ಸಿಬ್ಬಂದಿ ಮೇಲ್ವಿಚಾರಕರು ಕೊರತೆ ಇದ್ದು ಈ ರೀತಿ ಘಟನೆಗಳು ನಡೆಯುತ್ತಿವೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
