
ಉದಯವಾಹಿನಿ, ಔರಾದ್: ಸಂವಿಧಾನ ನಮ್ಮ ದೇಶದ ಗೌರವ, ಸ್ವಾಭಿಮಾನವಾಗಿದ್ದು, ಪ್ರಜಾಪ್ರಭುತ್ವದಿಂದಲೇ ಸರ್ವಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಯನಗುಂದಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಾಮಸುಂದರ್ ಖಾನಾಪೂರಕರ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳ ಜೊತೆಯಲ್ಲಿ ಮೂಲಭೂತ ಕರ್ತವ್ಯಗಳು ಕೂಡ ತಿಳಿಸಿದ್ದು, ನಾವೆಲ್ಲರೂ ಸಂವಿಧಾನಕ್ಕೆ ಬದ್ದರಾಗಿ ನಡೆಯುವುದು ಅತ್ಯವಶ್ಯಕವಾಗಿದೆ ಎಂದರು.ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಮಾತನಾಡಿ, ವಿದ್ಯಾರ್ಥಿಗಳು, ಸಾರ್ವಜನಿಕರು ಸಂವಿಧಾನವನ್ನು ಸರಿಯಾಗಿ ಅರಿತುಕೊಂಡು ಬಾಳಿದಾಗ ಮಾನವ ಹಕ್ಕುಗಳ ರಕ್ಷಣೆ ಸೇರಿದಂತೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು. ಮುಧೋಳ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೂರ್ಯಕಾಂತ ಸಿಂಗೆ ಅವರು ಸಂವಿಧಾನ ಪೀಠಿಕೆ ವಾಚನ ಮಾಡಿಸಿದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಅನೀಲಕುಮಾರ್, ನಾಲಂದಾ ಕಾಲೇಜು ಪ್ರಾಚಾರ್ಯ ಡಾ.ಮನ್ಮಥ ಡೋಳೆ, ಸರ್ಕಾರಿ ಕಾಲೇಜು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಮಾತನಾಡಿದರು. ಪಂಡರಿ ಕಸ್ತೂರೆ ಹಾಗೂ ವಿಶ್ವನಾಥ ಬಿರಾದಾರ್ ಅವರಿಂದ ಸಂವಿಧಾನ ಸಂಬಂಧಿತ ಸ್ವರಚಿತ ಕವನಗಳು ವಾಚಿಸಲಾಯಿತು.ಈ ಸಂದರ್ಭದಲ್ಲಿ ತಾಪಂ ಇಒ ಬಿರೇಂದ್ರ ಸಿಂಗ್ ಠಾಕೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಸೂದ್ ಅಹ್ಮದ್, ಪಿಎಸ್‌ಐ ರೇಣುಕಾ ಭಾಲೇಕರ್, ಬಿಸಿಎಂ ಅಧಿಕಾರಿ ರವಿಕುಮಾರ್, ಅಲ್ಪಸಂಖ್ಯಾತ ಅಧಿಕಾರಿ ಶಿವಕುಮಾರ್ ಕುಪ್ಪೆ, ರಾಮಣ್ಣ ವಡೆಯರ್, ಡಾ, ಫಯಾಜ್ ಅಲಿ, ದಯಾಸಾಗರ ಭೆಂಡೆ, ಶಿವಕುಮಾರ ಕಾಂಬಳೆ, ಬಾಲಾಜಿ ಅಮರವಾಡಿ, ಮಹಾದೇವ ಚಿಟಗೀರೆ, ಈಶ್ವರ ಕ್ಯಾದೆ ಸಂಜು ಮೇತ್ರೆ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿ ಪ್ರಮುಖರು ಸೇರಿದಂತೆ ಇನ್ನಿತರರಿದ್ದರು.
ಪ್ರತಿಭೆ ಮೆರೆದ ಎಕಲಾರ್ ವಿದ್ಯಾರ್ಥಿನಿ ಪ್ರತಿಭಾ : ತೊದಲು ನುಡಿಯಲ್ಲಿ ಮಾತು ಆರಂಭಿಸಿದ ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ಪ್ರತಿಭಾ ಅನೀಲಕುಮಾರ್ ತನ್ನ ಪರಿಚಯ ಹೇಳಿಕೊಂಡು ಸಂವಿಧಾನ ಪೀಠಿಕೆಯನ್ನು ಸಂಪೂರ್ಣ ಕಂಠಪಾಠ ರೂಪದಲ್ಲಿ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಇವಳ ಪ್ರತಿಭೆಯನ್ನು ವೇದಿಕೆ ಮೇಲಿನ ಗಣ್ಯರು ಕೊಂಡಾಡಿರುವುದಲ್ಲದೇ ಹಣದ ರೂಪದಲ್ಲಿ ಬಹಮಾನ ನೀಡಿ ಪ್ರೋತ್ಸಾಹಿಸಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಹಾದೇವ ಬಿಜಾಪೂರೆ ಮಗುವಿಗೆ ವಿಶೇಷ ಸನ್ಮಾನಗೈದು ಸಂವಿಧಾನ ಪೀಠಿಕೆ ಭಾವಚಿತ್ರ ಕಾಣಿಕೆಯಾಗಿ ನೀಡಿ ಶುಭ ಹಾರೈಸಿದರು.
