ಉದಯವಾಹಿನಿ, ದೇವರಹಿಪ್ಪರಗಿ: ತಾಲೂಕಿನ ಕಡ್ಲೆವಾಡ,ಚಿಕ್ಕರೂಗಿ ಹಾಗೂ ಅಂಕಲಗಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಎತ್ತು ಚಕ್ಕಡಿ ಯೊಂದಿಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿ ಶುಕ್ರವಾರದಂದು ಮೊಹರೆ ವೃತ್ತದಿಂದ ತಹಶೀಲ್ದಾರ್ ಕಚೇರಿ ಆವರಣದ ವರೆಗೆ ಚಕ್ಕಡಿ ಎತ್ತುಗಳ ಮೂಲಕ ಪಾದಯಾತ್ರೆಯಲ್ಲಿ ತೆರಳಿ ಪ್ರತಿಭಟನೆ ಆರಂಭಿಸಿ ಧರಣಿ ನಡೆಸಿದರು.ನಂತರ ತಹಸಿಲ್ದಾರ್ ಪ್ರಕಾಶ ಸಿಂದಗಿ ಅವರು ರೈತ ನಾಯಕರ ಜೊತೆ ಚರ್ಚಿಸಿ ಮನವೊಲಿಸಲು ಯತ್ನಿಸಿದರಾದರೂ ಜಗ್ಗದ ರೈತರು, ಕೆಬಿಜೆಎನ್ಎಲ್ ಅಧಿಕಾರಿಗಳು ಬಂದು ನೀರು ಹರಿಸುವ ಭರವಸೆ ನೀಡುವವರೆಗೆ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಸುಮಾರು ನಾಲ್ಕು ತಾಸುಗಳ ನಂತರ ಕೆಬಿಜೆಎನ್ಎಲ್ ಅಧಿಕಾರಿಗಳಾದ ಶಶಿಕಾಂತ ಶಿವನಾಳ, ವಿಶ್ವನಾಥ ಚವ್ಹಾಣ,ಶಿವಲಾಲ ಚವ್ಹಾಣ, ಯು.ಪಿ.ಸುಣವಾಣಿ ಹಾಗೂ ಶಿವಾಜಿ ಬಿರಾದಾರ ಅವರು ತಮ್ಮ ಮನವಿಯನ್ನು ಹಿಂದೆ ಹಿರಿಯ ಅಧಿಕಾರಿಗಳಿಗೆ ಕಳಿಸಿ ನೀರಾವರಿ ಸಲಹಾ ಸಮಿತಿಯ ಮುಂದೆ ತಂದು ಪರಿಶೀಲಿಸಲು ಮೂರು ದಿನಗಳ ಕಾಲಾವಕಾಶ ಕೋರಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಇದೇ ಸಂದರ್ಭದಲ್ಲಿ ಪಟ್ಟಣದ ಸದಯ್ಯನ ಮಠದ ಷ.ಬ್ರ. ವೀರಗಂಗಾಧರ ಶಿವಾಚಾರ್ಯರು, ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶಂಕರಗೌಡ ಹಿರೇಗೌಡ ಭೈರವಾಡಗಿ, ರೈತ ಮುಖಂಡರುಗಳಾದ ಅಜೀಜ ಯಲಗಾರ, ಸಂಗನಗೌಡ ಬಿರಾದಾರ, ಸಿದ್ದನಗೌಡ ಜಲಪುರ, ಬಸವರಾಜ ಕಲ್ಲೂರ, ವೀರೇಶ ಕುದುರಿ, ಶಿವಶಂಕರರಡ್ಡಿ ಅವರಾದಿ, ಶ್ರೀಕಾಂತ್ ಭಜಂತ್ರಿ, ಸಂಗಣ್ಣ ಸೌಕಾರ ಹುಲಸುಗುಂದ, ರಾಜು ಅಮರಖೇಡ, ಪ್ರಭುಗೌಡ ಪಾಟೀಲ, ಸಾಹೇಬಗೌಡ ರಡ್ಡಿ, ಪ್ರಭುಗೌಡ ಪಾಟೀಲ, ರಾಮು ದೇಸಾಯಿ, ಶಿವಶಂಕರ ರೂಗಿ ಸೇರಿದಂತೆ ಹಲವಾರು ರೈತ ಸಂಘದ ಪದಾಧಿಕಾರಿಗಳು, ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!