ಉದಯವಾಹಿನಿ ಕುಶಾಲನಗರ :-ಇಡೀ ವಿಶ್ವದಲ್ಲಿಯೇ ಮಾದರಿ ಸಂವಿಧಾನ ಒಳಗೊಂಡಿರುವ ಭಾರತವು ‘ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತದ ಪ್ರಜೆಗಳಾದ ನಾವು… ಎಂಬ ಪದವು ಎಲ್ಲರಲ್ಲಿ ಏಕತೆ, ಭ್ರಾತೃತ್ವ, ಉಂಟು ಮಾಡುತ್ತದೆ. ಜೊತೆಗೆ ಸಮಾನತೆ, ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯ ಒಳಗೊಂಡಿದೆ ಎಂದು ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ಅವರು ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅಂತರರಾಷ್ಟಿಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಶುಕ್ರವಾರ ನಡೆದ ‘ಸಂವಿಧಾನ ಪೀಠಿಕೆ ವಾಚನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂವಿಧಾನ ಪೀಠಿಕೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಒಳಗೊಂಡಿದ್ದು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವತಂತ್ರವನ್ನು ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು. ಭಾರತೀಯ ಪ್ರಜೆಗಳಾದ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳು ದೊರೆಯುವಂತೆ ಮಾಡುವುದು ಸಂವಿಧಾನದ ಆಶಯವಾಗಿದೆ. ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಬೇಕಿದೆ ಎಂದು ಅನಿತಾ ಪೂವಯ್ಯ ಅವರು ವಿವರಿಸಿದರು. ಸಂವಿಧಾನದಿ0ದ ಹಲವು ಕಾನೂನು ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಲಿವೆ. ಆ ದಿಸೆಯಲ್ಲಿ ಭಾರತೀಯ ಪ್ರಜೆಗಳಿಗೆ ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು. ಸಭೆಯ ಆರಂಭದಲ್ಲಿ ಸಂವಿಧಾನ ಪೀಠಿಕೆ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗಣ್ಯರು ನೆರವೇರಿಸಿದರು. ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಗಣ್ಯರಿಗೆ ಹಸ್ತಾಂತರ ಮಾಡಲಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ನಾಡಗೀತೆ ಮತ್ತು ರಾಷ್ಟಗೀತೆ ಹಾಡಿದರು. ರಮೇಶ್ ನಿರೂಪಿಸಿ, ವಂದಿಸಿದರು. ‘ಸಂವಿಧಾನ ಪೀಠಿಕೆ ವಾಚನ’ ರಾಜ್ಯ ಮಟ್ಟದ ಕಾರ್ಯಕ್ರಮ ವೀಕ್ಷಣೆಗೆ ವರ್ಚುವಲ್ ಮೂಲಕ ಅವಕಾಶ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!