ಉದಯವಾಹಿನಿ, ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯನ್ನು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಖಂಡಿಸಿ, ಅದಕ್ಕೆ ಪ್ರತಿರೋಧ ಒಡ್ಡಬೇಕು ಎಂಬುದೂ ಸೇರಿದಂತೆ ಹಲವು ನಿರ್ಣಯಗಳನ್ನು ಶನಿವಾರ ಇಲ್ಲಿ ಆರಂಭವಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಸಹಕಾರಿ ಒಕ್ಕೂಟದ ತತ್ವಗಳು ಹಾಗೂ ಸಂಪ್ರದಾಯಗಳನ್ನು ನಾಶ ಮಾಡಿದೆ ಎಂದೂ ನಿರ್ಣಯದಲ್ಲಿ ಹೇಳಲಾಗಿದೆ. ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯವನ್ನು ಸಹ ಅಂಗೀಕರಿಸಲಾಗಿದೆ.
ಜಾತಿ ಅಥವಾ ಧರ್ಮ, ಶ್ರೀಮಂತ ಅಥವಾ ಬಡವ, ಯುವ ಸಮುದಾಯ ಇಲ್ಲವೇ ವಯೋವೃದ್ಧ ಎಂಬ ಭೇದವಿಲ್ಲದೇ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ರಾಷ್ಟ್ರವನ್ನು ಮರುನಿರ್ಮಾಣ ಮಾಡುವ ಶಪಥವನ್ನು ಸಿಡಬ್ಲ್ಯುಸಿ ಮಾಡಿದೆ. 2021ರಲ್ಲಿ ಜನಗಣತಿ ನಡೆಸದೇ ಇರುವುದು ಅವಮಾನಕರ ಸಂಗತಿ ಎಂದೂ ಅಭಿಪ್ರಾಯಪಟ್ಟಿದೆ.ಅಲ್ಲದೇ, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಹೋರಾಡುವುದಕ್ಕಾಗಿ ‘ಇಂಡಿಯಾ’ ಮೈತ್ರಿಕೂಟದಡಿ ಎಲ್ಲ ವಿಪಕ್ಷಗಳು ಒಂದುಗೂಡಿರುವುದನ್ನು ಸ್ವಾಗತಿಸಿ ನಿರ್ಣಯ ಕೈಗೊಂಡಿರುವ ಕಾರ್ಯಕಾರಿ ಸಮಿತಿ, ‘ಇಂಡಿಯಾ’ ರಚನೆಯಿಂದಾಗಿ ಪ್ರಧಾನಿ ಮೋದಿ ಅವರಿಗೆ ದಿಗ್ಭ್ರಮೆಯಾಗಿದೆ ಎಂದು ಹೇಳಿದೆ.

 

Leave a Reply

Your email address will not be published. Required fields are marked *

error: Content is protected !!