ಉದಯವಾಹಿನಿ, ನವದೆಹಲಿ: ಸೋಂಕಿಗೆ ತುತ್ತಾಗದ, ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಚೀತಾಗಳನ್ನೇ ಮುಂದಿನ ದಿನಗಳಲ್ಲಿ ಭಾರತಕ್ಕೆ ತರಲು ಯೋಜಿಸಲಾಗಿದೆ ಎಂದು ಚೀತಾ ಮರುಪರಿಚಯ ಯೋಜನೆಯ ಮುಖ್ಯಸ್ಥ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್.ಪಿ ಯಾದವ್ ತಿಳಿಸಿದ್ದಾರೆ.
ನಮೀಬಿಯಾದಿಂದ ತಂದಿದ್ದ ಚೀತಾಗಳನ್ನು ಕಳೆದ ವರ್ಷ ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಿದ್ದರು. ಈ ಮೂಲಕ ಭಾರತಕ್ಕೆ ಚೀತಾವನ್ನು ಪರಿಚಯಿಸುವ ಯೋಜನೆಯನ್ನು ಉದ್ಘಾಟಿಸಿದ್ದರು. ಈ ಭಾನುವಾರ ಯೋಜನೆಗೆ ಒಂದು ವರ್ಷ ತುಂಬಲಿದೆ.
ಈ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿರುವ ಎಸ್.ಪಿ ಯಾದವ್, ‘ಯೋಜನೆಯ ಎರಡನೇ ವರ್ಷದಲ್ಲಿ ಚೀತಾಗಳ ಸಂತಾನೋತ್ಪತ್ತಿಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ರೇಡಿಯೊ ಕಾಲರ್‌ಗಳಿಂದ ಚೀತಾಗಳ ಸಾವು ಸಂಭವಿಸಿದೆ ಎಂಬ ವಾದ ನಿರಾಕರಿಸಿರುವ ಅವರು, ದಕ್ಷಿಣ ಆಫ್ರಿಕಾದಿಂದಲೇ ತರಲಾದ ಹೊಸ ರೇಡಿಯೊ ಕಾಲರ್‌ಗಳನ್ನು ಚೀತಾಗಳಿಗೆ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮುಖ್ಯಸ್ಥರೂ ಆಗಿರುವ ಯಾದವ್, ‘ಚೀತಾಗಳ ಮುಂದಿನ ತಂಡವನ್ನು ದಕ್ಷಿಣ ಆಫ್ರಿಕಾದಿಂದ ತರಿಸಿಕೊಳ್ಳಲಾಗುವುದು. ಅವುಗಳನ್ನು ಮಧ್ಯಪ್ರದೇಶದ ಗಾಂಧಿ ಸಾಗರ್ ಅಭಯಾರಣ್ಯಕ್ಕೆ ಬಿಡಲಾಗುವುದು’ ಎಂದು ತಿಳಿಸಿದರು. ‘ಕುನೊ ರಾಷ್ಟ್ರೀಯ ಉದ್ಯಾನ 20 ಚೀತಾಗಳಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಈಗ, ಒಂದು ಮರಿ ಸೇರಿದಂತೆ 15 ಚೀತಾಗಳಿವೆ. ಮುಂದಿನ ಹಂತದಲ್ಲಿ ತರಲಾಗುವ ಚೀತಾಗಳನ್ನು ಇತರ ಅಭಯಾರಣ್ಯಗಳಲ್ಲಿ ಇರಿಸಲಾಗುವುದು. ಮಧ್ಯಪ್ರದೇಶದ ಗಾಂಧಿ ಸಾಗರ್ ಮತ್ತು ನೌರದೇಹಿ ಅಭಯಾರಣ್ಯ ಇದಕ್ಕೆ ಸೂಕ್ತವಾಗಿದೆ’ ಎಂದರು.
