ಉದಯವಾಹಿನಿ ಅಫಜಲಪುರ :ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರನೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಖುದ್ದಾಗಿ ಆಸ್ಪತ್ರೆಯ ಎಲ್ಲಾ ವಾರ್ಡಗಳನ್ನು ವೀಕ್ಷಿಸಿ ಸಮಸ್ಯೆಗಳನ್ನು ಆಲಿಸಿದರು.ತಾಲೂಕು ಆರೋಗ್ಯ ಅಧಿಕಾರಿ ರವಿ ಬಿರಾದಾರ ಮತ್ತು ಆಡಳಿತ ಅಧಿಕಾರಿ ವಿನೋದ ರಾಠೋಡ ಅವರೊಂದಿಗೆ ಆಸ್ಪತ್ರೆಯ ಕುಂದುಕೊರತೆಗಳನ್ನು ಆಲಿಸಿದ ಅವರು ಸುಮಾರು ಒಂದು ಗಂಟೆಗಳ ಕಾಲ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ವೈದ್ಯಾಧಿಕಾರಿ ಗಳೊಂದಿಗೆ ಚರ್ಚಿಸಿದರು. ಜನರಲ್ ವಾರ್ಡ, ಐಸೊಲೇಶನ್ ವಾರ್ಡ ಆಪರೇಶನ್ ತೆಟರ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ಕೋಣೆಗಳನ್ನು ವೀಕ್ಷಿಸಿದರು. ಆಸ್ಪತ್ರೆಗೆ ಬೇಕಾಗುವ ಸಾಮಗ್ರಿಗಳು ಯಾವವು ಎಂದು ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಸೂಕ್ಷ್ಮ ನಿಗಾವಹಿಸಲು ವೈದ್ಯರಿಗೆ ತಿಳಿಸಿದರು.ನಂತರ ವೈದ್ಯರಿಂದ ಮಾಹಿತಿಯನ್ನು ಪಡೆದ ಅವರು, ರಾತ್ರಿ ಸಮಯದಲ್ಲಿ ನೈಟ್ ಡ್ಯೂಟಿ ಮಾಡುವ ವೈದ್ಯರಿಗೆ ಕುಡುಕರಿಂದ ತೊಂದರೆ ಆಗುವುದನ್ನು ಆಲಿಸಿ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ರಕ್ಷಣೆ ನೀಡಲು ಸೂಚಿಸಿದರು.ನಂತರ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ನಂತರ ಸಾರ್ವಜನಿಕ ಸಮಸ್ಯೆಗಳ ಮನವಿ ಪಡೆದರು.ತದನಂತರ ಸೊನ್ನ ಡ್ಯಾಮ್ ಭೇಟಿ ನೀಡಿ ನೀರಿನ ಪ್ರಮಾಣವನ್ನು ಪರೀಕಸಿದರು ಯಾವುದೇ ಕಾರಣಕ್ಕೂ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
