
ಉದಯವಾಹಿನಿ, ಚಿತ್ರದುರ್ಗ: ಸಮಾಜಕ್ಕೆ ಹಿರಿಯ ನಾಗರಿಕರ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕು. ಹಿರಿಯ ನಾಗರಿಕರ ಮಾರ್ಗದರ್ಶನ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಅರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ನಾವು ಎಷ್ಟು ದಿನ ಬದುಕಿದ್ದೇವೋ ಎನ್ನುವುದಕ್ಕಿಂತ ನಾವು ಎಷ್ಟು ಆರೋಗ್ಯಯುತವಾಗಿ ಬದುಕಿದ್ದೇವೆ ಎನ್ನುವುದು ಬಹಳ ಮುಖ್ಯ. ಹಾಗಾಗಿ ಹಿರಿಯ ನಾಗರಿಕರು ಆರೋಗ್ಯ ತಪಾಸಣೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, 60 ವರ್ಷ ಮೇಲ್ಪಟ್ಟವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಸಮಸ್ಯೆಗಳು ಬರುವುದಕ್ಕೆ ಶುರುವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತದೆ. ಹಿರಿಯ ನಾಗರಿಕರ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಚಿಕ್ಕಮಕ್ಕಳಂತೆ ಪಾಲನೆ ಪೋಷಣೆ ಮಾಡುವ ಅಗತ್ಯವಿದೆ ಎಂದರು. ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಅವರು ಹಿರಿಯ ನಾಗರಿಕರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಾಗೂ ಇಂಡಿಯಾನ ಎಸ್‍ಜೆಎಂ ಹಾರ್ಟ್ ಸೆಂಟರ್‍ನ ತಜ್ಞ ವೈದ್ಯರು ಹಿರಿಯ ನಾಗರಿಕರಿಗಾಗಿ ರಕ್ತದೊತ್ತಡ, ಮದುಮೇಹ, ನೇತ್ರ ತಪಾಸಣೆ, ರಕ್ತಪರೀಕ್ಷೆ, ದಂತ ತಪಾಸಣೆ ಸೇರಿದಂತೆ ಹಲವು ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್. ಗಂಗಾಧರ್, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಆರ್.ರಂಗಪ್ಪ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಪವಿತ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಹೃದಯ ರೋಗ ತಜ್ಞ ಡಾ.ಕಾರ್ತೀಕ್, ವೈದ್ಯರಾದ ಡಾ.ಸಂದೀಪ್, ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರುಗಳು, ಹಿರಿಯ ನಾಗರಿಕರು ಇದ್ದರು.
