
ಉದಯವಾಹಿನಿ ನಾಗಮಂಗಲ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಎದುರು ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿನಡೆದಿದೆ.ತಾಲೂಕಿನ ಬೆಳ್ಳೂರ್ ಕ್ರಾಸ್ ಸಮೀಪದ ರಸ್ತೆ ಬದಿ ನಿಂತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಾರೊಂದು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಮೃತರನ್ನು ಬೆಂಗಳೂರು ನಿವಾಸಿಗಳಾದ ಬೆಂಡಿಗನಹಳ್ಳಿ ನಮಿತಾ, ಇನ್ಫೋಸಿಸ್ ನೌಕರ ರಾಜಸ್ಥಾನದ ಪಂಕಜ್ ಶರ್ಮಾ,ಹೊಸಕೋಟೆಯ ವಂಶಿ ಕೃಷ್ಣ ಹಾಗೂ ಧಾರವಾಡದ ರಘುನಾಥ್ ಭಜಂತ್ರಿ ಎಂದು ಗುರುತಿಸಲಾಗಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಎದುರು ಬುಧವಾರ ಬೆಳ್ಳಿಗ್ಗೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ ಗೆ ಹಾಸನ ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂದಿನ ಅರ್ಧ ಭಾಗ ಬಸ್ಸಿನೊಳಗೆ ನುಗ್ಗಿದೆ. ಕಾರಿನಲ್ಲಿದ್ದ ಓರ್ವ ಮಹಿಳೆ, ಮೂವರು ಪುರುಷರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
