
ಉದಯವಾಹಿನಿ ಕೋಲಾರ : ಜಿಲ್ಲೆಯಾದ್ಯಂತ ಪಶುಸಂಗೋಪನಾ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದ್ದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನಾಲ್ಕೈದು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಿಪಬ್ಲಿಕನ್ ಸೇನೆ ಜಿಲ್ಲಾ ಘಟಕದಿಂದ ಶನಿವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
*ಈ ಸಂದರ್ಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ ಜಿಲ್ಲಾ ಅಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹೆಚ್ಚಿನ ಅನುದಾನವನ್ನು ಜನರ ಅಭಿವೃದ್ಧಿಗಾಗಿ ಮೀಸಲಿಟ್ಟಿದೆ ಆದರೆ ಜಿಲ್ಲೆಯ ಕೆಲವು ಅಧಿಕಾರಿಗಳು ಮಾತ್ರ ಫಲಾನುಭವಿಗಳಿಗೆ ಯೋಜನೆ ತಲುಪಿಸದೆ ಮನಬಂದಂತೆ ಬಳಕೆ ಮಾಡಿಕೊಂಡಿದ್ದಾರೆ ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ ಪ್ರತಿಯೊಂದು ತಾಲೂಕಿನ ಅಧಿಕಾರಿಗಳು ಈ ಕೋಟ್ಯಾಂತರ ರೂಪಾಯಿಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಇದರ ವಿರುದ್ದ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಅವರು ಮೌನ ವಹಿಸಿದ್ದಾರೆ ಮೇಲು ಅಧಿಕಾರಿಗಳ ಮೌನವೇ ಕೆಳ ದರ್ಜೆಯ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.*
ಪಶುಸಂಗೋಪನೆ ಇಲಾಖೆಯಲ್ಲಿ ಅಧಿಕಾರಿಗಳು ಮಾಡಿರುವ ಬಹುಕೋಟಿ ರೂಪಾಯಿಗಳ ಭ್ರಷ್ಟಾಚಾರವು ಇಡಿ ಜಿಲ್ಲೆಗೆ ಅಪಮಾನವಾಗುವಂತಾಗಿದೆ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಾ ತುಳಸೀರಾಂ ಎಂಬುವರು ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ, ಜಿಲ್ಲೆಗೆ ಸಂಬಂಧಿಸಿದ ಕೆಜಿಎಫ್ ತಾಲ್ಲೂಕಿನ ಗುಟ್ಟಹಳ್ಳಿ ಭಾಗದಲ್ಲಿ ಸರ್ಕಾರಿ ಗೋಶಾಲೆಯೆಂದು ನಿರ್ಮಾಣ ಮಾಡಿರುವುದು ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಉಪ ನಿರ್ದೇಶಕರ ಸೇವಾ ಅವಧಿಯಲ್ಲಿ ಎಂದು ಸಾಬೀತಾಗಿದೆ ಆದರೆ ಗಂಗಾ ತುಳಸೀರಾಮಯ್ಯನವರು ನನ್ನ ಸೇವಾವಧಿಯಲ್ಲಿ ಈ ಸರ್ಕಾರಿ ಗೋಶಾಲೆಯನ್ನು ನಿರ್ಮಾಣ ಮಾಡಿದ್ದೇವೆ ಎಂದು ಸುಳ್ಳು ದಾಖಲೆಗಳ ಮೂಲಕ ಒಂದು ಕೋಟಿಗೂ ಹೆಚ್ಚು ರೂಪಾಯಿಗಳನ್ನು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಭಾರತ ದೇಶದಲ್ಲಿ ಬಡತನ, ಹಸಿವು, ಅವಮಾನ, ಅನಕ್ಷರತೆ, ಅಸ್ಪೃಶ್ಯತೆಯ ನಿಂದನೆಗಳ ಕವಲುಗಳು ಕೊನೆಗಾಣಲಿಲ್ಲ. ಬಲಿಷ್ಟವರ್ಗ ಮತ್ತು ಬಲಿಷ್ಟ ಸಮುದಾಯದ ಅಧಿಕಾರಿಗಳು ಕಿತ್ತು ತಿನ್ನುವ ಆಹಾರ ನಾವಾಗಿದ್ದೇವೆಂದರೆ ಈ ನಮ್ಮ ದೇಶದಲ್ಲಿ ವಂಚಿಸುವವರು ವಂಚಕರಿರುವ ತನಕ ಬಡತನ ಎಂದೂ ನಿರ್ಮೂಲನೆಯಾಗದು, ಸಿರಿವಂತ ಅಧಿಕಾರಿಗಳು ವಂಚಿಸಿ ಕೋಟ್ಯಾಧಿಪತಿಗಳಾಗಿರುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಕಾರ್ಯ ನರ್ವಹಿಸುತ್ತಿರುವ ಪಶುವೈದ್ಯ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿಗಳು ವಂಚನೆ ಮಾಡಿರುವುದೇ ಸಾಕ್ಷಿಯಾಗಿದೆ 2019ರಿಂದ ಈ ಹಗರಣಗಳಿಗೆ ಕ್ರಮ ಕೈಗೊಳ್ಳಲು ಸಾಕಷ್ಟು ಬಾರಿ ಮನವಿಗಳು ನೀಡಿದ್ದೇವೆ ಅಧಿಕಾರಿಗಳು ಮಾತ್ರ ಸ್ಪಂದಿಸಿಲ್ಲ ಕೂಡಲೇ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಇಲ್ಲದೆ ಹೋದರೆ ಮುಂದೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಅನಿರ್ದಿಷ್ಟ ಅವಧಿ ತಮಟೆ ಚಳವಳಿಯೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ನಿಮ್ಮ ಮನವಿಗೆ ನ್ಯಾಯ ಸಿಗುವ ರೀತಿಯಲ್ಲಿ ಕಾನೂನು ಪ್ರಕಾರ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯ ಮುಖಂಡರಾದ ಪ್ರಜ್ವಲ್ ಜಿಗಣಿ ಶಂಕರ್, ಬೆಳತೂರು ವೆಂಕಟೇಶ್, ರಾಯಪ್ಪಗಾರು, ಬಸೀರ್ ಅಹಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಾರ್ಮಿಕ ಘಟಕದ ಅಮರೇಶ್, ಶ್ರೀನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಅಮರೇಶ್ ಮುಂತಾದವರು ಇದ್ದರು.
