ಉದಯವಾಹಿನಿ, ಮೈಸೂರು: ರಾಜ್ಯದಲ್ಲಿ ಕಾಡುಪ್ರಾಣಿಗಳು,ಮಾನವನ ಸಂಘರ್ಷಕ್ಕೆ ಮತ್ತೊಂದು ಬಲಿಯಾಗಿದೆ.ಆನೆ, ಚಿರತೆಗಳ ದಾಂಗುಡಿಯಿಂದ ಬದುಕುವುದೇ ಕಷ್ಟ ಎನಿಸುವ ಹೊತ್ತಿನಲ್ಲಿ ಹುಲಿಯೊಂದು ರೈತನನ್ನು ಕೊಂದು ಹಾಕಿದ ದಾರುಣ ಘಟನೆ ಹುಣಸೂರು ತಾಲೂಕಿನ ಉಡುವೆಪುರದಲ್ಲಿ ನಡೆದಿದೆ.ಮೃತಪಟ್ಟ ರೈತನನ್ನು ಉಡುವೆಪುರದ ಗಣೇಶ್ (೫೮) ಎಂದು ಗುರುತಿಸಲಾಗಿದೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶ ಸಮೀಪದ ಗ್ರಾಮದ ನಿವಾಸಿಯಾಗಿರುವ ಗಣೇಶ ಅವರು ನಿನ್ನೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಆದರೆ, ಸಂಜೆ ಜಾನುವಾರುಗಳು ಮಾತ್ರ ಮನೆಗೆ ವಾಪಸ್ ಆಗಿವೆ. ಗಣೇಶ್ ಮರಳಿ ಬಂದಿರಲಿಲ್ಲ.ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಹುಡುಕಾಟದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ವಲಯದಲ್ಲಿ ಕೆರೆ ಬಳಿ ಗಣೇಶ್ ಶವ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು.
