ಉದಯವಾಹಿನಿ, ಲಂಡನ್: ಬ್ರಿಟನ್ ಸರ್ಕಾರದ ಪರಿಷ್ಕೃತ ವೀಸಾ ಶುಲ್ಕ ಬುಧವಾರದಿಂದ ಜಾರಿಗೆ ಬರಲಿದ್ದು, ಇನ್ನು ಮುಂದೆ ಬ್ರಿಟನ್‌ಗೆ ತೆರಳಲು ಇಚ್ಛಿಸುವ ಭಾರತ ಸೇರಿದಂತೆ ಇತರೆ ದೇಶಗಳ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳ ಜೇಬಿಗೆ ಹೊರೆಯಾಗಲಿದೆ.
ಆರು ತಿಂಗಳ ಒಳಗಿನ ಸಂದರ್ಶಕರ ವೀಸಾಕ್ಕೆ 15 ಪೌಂಡ್ ಹಾಗೂ ವಿದ್ಯಾರ್ಥಿ ವೀಸಾಕ್ಕೆ 127 ಪೌಂಡ್ ಶುಲ್ಕ ಹೆಚ್ಚಿಸಲಾಗಿದೆ.
ಸೆಪ್ಟೆಂಬರ್‌ನಲ್ಲಿ ಬ್ರಿಟನ್ ಸಂಸತ್‌ನಲ್ಲಿ ವೀಸಾ ಶುಲ್ಕ ಹೆಚ್ಚಳ ನೀತಿಯನ್ನು ಮಂಡಿಸಲಾಗಿತ್ತು. ಬ್ರಿಟನ್ ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈಗ ಆರು ತಿಂಗಳ ಒಳಗಿನ ಅವಧಿಯ ಸಂದರ್ಶಕರ ವೀಸಾಕ್ಕೆ 115 ಪೌಂಡ್ (₹11,552) ಹಾಗೂ ವಿದ್ಯಾರ್ಥಿ ವೀಸಾಕ್ಕೆ 490 ಪೌಂಡ್ (₹49,224) ಶುಲ್ಕ ಭರಿಸಬೇಕಿದೆ.
‘ನಾವು ಸಾರ್ವಜನಿಕ ಸೇವೆಗೆ ಹೆಚ್ಚಿನ ಬಂಡವಾಳ ಒದಗಿಸಬೇಕಿದೆ. ಅಲ್ಲದೇ, ಆ ವಲಯದ ವೇತನ ಕೊಡುಗೆಯನ್ನೂ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಹಾಗಾಗಿ, ವೀಸಾ ಶುಲ್ಕ ಹೆಚ್ಚಿಸುವ ಸರ್ಕಾರದ ನಡೆ ಸರಿಯಾಗಿದೆ’ ಎಂದು ಗೃಹ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಉದ್ಯೋಗ ಮತ್ತು ಸಂದರ್ಶಕರ ವೀಸಾ ಶುಲ್ಕವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ. ಆದ್ಯತೆ, ವಿದ್ಯಾರ್ಥಿ ಹಾಗೂ ಉದ್ಯೋಗದಾತ ಸಂಸ್ಥೆಯು ತನ್ನ ನೌಕರರಿಗೆ ಕಲ್ಪಿಸುವ ವೀಸಾ ಶುಲ್ಕವನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ.
