ಉದಯವಾಹಿನಿ, ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕುಲವಳ್ಳಿ ಸೇರಿ ಒಂಬತ್ತು ಗೊಂಚಲು ಗ್ರಾಮಗಳ ಜಮೀನಿನಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತ ಬಂದಿರುವ ರೈತರಿಗೆ ಭೂಮಿ ಹಕ್ಕು ನೀಡಬೇಕು. ಸಿದ್ಧಪಡಿಸಿರುವ ಭೂಮಿ ನಕ್ಷೆ ನೀಡಬೇಕು. ಜಾನುವಾರು, ಮಕ್ಕಳು, ಮಹಿಳೆಯರು ಹಾಗೂ ರೈತರು ಸೇರಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಹೊರಟಿದ್ದ ವಾಹನಗಳನ್ನು ತಡೆದ ಪರಿಣಾಮ ಎಲ್ಲರೂ ನಡೆದುಕೊಂಡು ಬಂದು ಹೆದ್ದಾರಿ ಸೇರಿದರು. ಅಲ್ಲಿ ಒಂದೂವರೆ ತಾಸು ಎರಡೂ ಬದಿಯ ಹೆದ್ದಾರಿ, ಸರ್ವೀಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಸ್ತೆಯ ಮೇಲೆ ಒಲೆ ಹೂಡಿ ಅಡುಗೆ ಮಾಡಲೂ ಪ್ರಾರಂಭಿಸಿದರು. ಹಠಾತ್ ಹೆದ್ದಾರಿ ಬಂದ್ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತವು. ಬೆಳಗಾವಿಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಕುರುಬರ ಸಮಾವೇಶಕ್ಕೆ ಹೊರಟಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೂ ಬಂದ್ ಬಿಸಿ ತಟ್ಟಿತು. ಮಾರ್ಗ ಬದಲಿಸಿ ಖಾನಾಪುರ ಮೂಲಕ ಬೆಳಗಾವಿಗೆ ತೆರಳುವಂತೆ ಪೊಲೀಸರು ಅವರಿಗೆ ಸೂಚಿಸಿದರು.
ಬೆಳಗಾವಿಗೆ ಬಂದಿದ್ದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಮಯ ಸಿಗದ ಕಾರಣ ಕಿತ್ತೂರು ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತಪರ ಹೋರಾಟಗಾರ ಪಿ.ಎಚ್. ನೀಲಕೇರಿ, ಬಿಷ್ಟಪ್ಪ ಶಿಂಧೆ ತಿಳಿಸಿದರು.
