ಉದಯವಾಹಿನಿ, ನ್ಯೂಯಾರ್ಕ್: ೨೦೨೫ರ ನಾಸಾದ ಮಹತ್ವಪೂರ್ಣ ಆರ್ಟೆಮಿಸ್ ೩ರ (ಚಂದ್ರಗ್ರಹಕ್ಕೆ ತೆರಳುವ ಮಿಷನ್) ಯೋಜನೆಗೆ ಎಲ್ಲಾ ರೀತಿಯ ಸಿದ್ಧತೆ ಭರದಿಂದ ನಡೆಯುತ್ತಿದೆ. ಈ ನಡುವೆ ಜಗತ್ತಿನ ಐಷಾರಾಮಿ ಫ್ಯಾಷನ್ ಡಿಸೈನರ್ ಇಟಲಿಯ ಪ್ರಾಡಾ ಚಂದ್ರನ ಮಿಷನ್‌ಗಾಗಿ ಗಗನಯಾತ್ರಿಗಳಿಗೆ ಬಾಹ್ಯಾಕಾಶ ಉಡುಪುಗಳನ್ನು ವಿನ್ಯಾಸಗೊಳಿಸಲಿದೆ. ಹಾಗಾಗಿ ಉಡುಪು ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಸದ್ಯ ಎಲ್ಲರ ಕುತೂಹಲ ಕೆರಳಿಸಿದೆ.
ಮತ್ತೊಂದು ಖಾಸಗಿ ಸಂಸ್ಥೆ ಆಕ್ಸಿಯಮ್ ಸ್ಪೇಸ್ ಜೊತೆಗೂಡಿ ಇಟಲಿಯ ಪ್ರಾಡಾ ಗಗನಯಾತ್ರಿಗಳಿಗೆ ಐಷಾರಾಮಿ ಉಡುಪುಗಳನ್ನು ವಿನ್ಯಾಸಗೊಳಿಸಲಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಕ್ಸಿಯಮ್ ಸ್ಪೇಸ್, ಪ್ರಾಡಾ ಯೋಜನೆಗೆ ಸಾಮಗ್ರಿಗಳು ಮತ್ತು ಉತ್ಪಾದನೆಯೊಂದಿಗೆ ಪರಿಣತಿಯನ್ನು ತರಲಿದೆ ಎಂದು ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಈಗಾಗಲೇ ನಾಲ್ಕು ಬಾರಿ ಬಾಹ್ಯಾಕಾಶ ನಡಿಗೆಗಳನ್ನು ನಡೆಸಿರುವ ಪ್ರೊಫೆಸರ್ ಜೆಫ್ರಿ ಹಾಫ್‌ಮನ್, ಪ್ರಾಡಾ ಅವರು ವಿವಿಧ ರೀತಿಯ ಸಂಯೋಜಿತ ಬಟ್ಟೆಗಳೊಂದಿಗೆ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ಹೊಸ ಬಾಹ್ಯಾಕಾಶ ಸೂಟ್‌ನ ಹೊರ ಪದರಗಳಿಗೆ ಕೆಲವು ನೈಜ ತಾಂತ್ರಿಕ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ. ಆದರೆ ಜನರು ಗಗನಯಾತ್ರಿಗಳನ್ನು ಅಲಂಕಾರಿಕ ಉಡುಪುಗಳಲ್ಲಿ ನೋಡುವ ನಿರೀಕ್ಷೆ ಇರಿಸಬಾರದು. ಉತ್ತಮ ಉಷ್ಣ ಪರಿಸರವನ್ನು ನಿರ್ವಹಿಸುವುದು ನಿಜವಾಗಿಯೂ ನಿರ್ಣಾಯಕ ವಿಷಯ. ಬಾಹ್ಯಾಕಾಶದ ಉಡುಪುಗಳು ನಿಜವಾಗಿಯೂ ಚಿಕಣಿ ಬಾಹ್ಯಾಕಾಶ ನೌಕೆಯಂತಿದೆ. ಅದು ಒತ್ತಡ, ಆಮ್ಲಜನಕವನ್ನು ಒದಗಿಸಬೇಕು, ನಿಮ್ಮನ್ನು ಸಮಂಜಸವಾದ ತಾಪಮಾನದಲ್ಲಿ ಇಡಬೇಕು ಎಂದು ಅವರು ತಿಳಿಸಿದ್ದಾರೆ. ಆರ್ಟೆಮಿಸ್ ೩ ಮಿಷನ್‌ಗಾಗಿ ಕಳೆದ ವರ್ಷ ಆಕ್ಸಿಯಮ್ ಸ್ಪೇಸ್ ಸ್ಪೇಸ್‌ಸೂಟ್ ಅನ್ನು ಅನಾವರಣಗೊಳಿಸಿದ್ದು, ಇದನ್ನು ಮಿಷನ್‌ನಲ್ಲಿ ಗಗನಯಾತ್ರಿಗಳು ಧರಿಸಲಿದ್ದಾರೆ ಎಂದು ತಿಳಿಸಿತ್ತು. ಈ ಸೂಟ್ ೫೫ ಕೆಜಿ ತೂಕವಿದ್ದು, ಮಹಿಳಾ ಗಗನಯಾತ್ರಿಗಳಿಗೆ ಇದು ಹೆಚ್ಚು ಸೂಕ್ತವಾಗಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!