ಉದಯವಾಹಿನಿ, ಬೇರೂತ್ : ಸಿರಿಯಾದ ಮಿಲಿಟರಿ ಅಕಾಡೆಮಿಯ ಮೇಲೆ ನಡೆದ ಆಗಂತುಕರ ಭೀಕರ ಡ್ರೋನ್ ದಾಳಿಯಲ್ಲಿ ೨೧ ನಾಗರಿಕರ ಸಹಿತ ೧೧೨ ಮಂದಿ ಮೃತಪಟ್ಟು, ೨೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ದಾಳಿ ನಡೆಸಿದ ಹೊಣೆಯನ್ನು ಯಾರೂ ಈತನಕ ಹೊತ್ತುಕೊಂಡಿಲ್ಲ. ಅತ್ತ ಮತ್ತೊಂದು ಘಟನೆಯಲ್ಲಿ ಖುರ್ದಿಶ್ ವಶದಲ್ಲಿರುವ ಈಶಾನ್ಯ ಭಾಗದಲ್ಲಿ ಟರ್ಕಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ೯ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಸರ್ಕಾರಿ ಸ್ವಾಮ್ಯದ ಮನೆಗಳ ಮೇಲೆ ನಡೆದ ಈ ಭೀಕರ ದಾಳಿಯ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇದೆ ಎಂದು ಸರ್ಕಾರಿ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಪ್ರತ್ಯೇಕ ಘಟನೆಯಲ್ಲಿ ಟರ್ಕಿ ಯುದ್ಧಪೀಡಿದ ದೇಶದ ಖುರ್ದಿಶ್ ವಶದಲ್ಲಿರುವ ಈಶಾನ್ಯ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಟರ್ಕಿಯ ಅಂಕಾರದಲ್ಲಿ ಭಯೋತ್ಪಾದಕ ತಂಡದಿಂದ ಭೀಕರ ಬಾಂಬ್ ದಾಳಿ ನಡೆದಿತ್ತು. ಈ ಬಾಂಬ್ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸುವುದಾಗಿ ಟರ್ಕಿ ಈ ಮುನ್ನ ಎಚ್ಚರಿಕೆ ನೀಡಿತ್ತು. ಇನ್ನು ಸಿರಿಯಾದ ಸಿಟಿ ಆಫ್ ಹೋಮ್ಸ್‌ನಲ್ಲಿ ಸಶಸ್ತ್ರ ಉಗ್ರಗಾಮಿ ಸಂಘಟನೆಗಳು, ಸೇನಾ ಅಕಾಡೆಮಿಯ ಅಧಿಕಾರಿಗಳ ಘಟಿಕೋತ್ಸವ ಸಮಾರಂಭದ ವೇಳೆ ಈ ದಾಳಿ ನಡೆಸಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ಸನಾ ವರದಿ ಮಾಡಿದೆ. ಬ್ರಿಟನ್ ಮೂಲದ ನಿಗಾ ಸಂಸ್ಥೆಯಾದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಪ್ರಕಾರ, ೧೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ಅರ್ಧದಷ್ಟು ಮಂದಿ ಮಿಲಿಟರಿ ಪದವಿ ಪಡೆದವರು. ೧೪ ಮಂದಿ ನಾಗರಿಕರೂ ದಾಳಿಯಲ್ಲಿ ಬಲಿಯಾಗಿದ್ದರೆ. ಈ ಘಟನೆಯಲ್ಲಿ ಕನಿಷ್ಠ ೧೨೫ ಮಂದಿ ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!