
ಉದಯವಾಹಿನಿ ಪಾವಗಡ: ತಾಲ್ಲೂಕಿನಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡಲು ಜಮೀನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ತಾಲ್ಲೂಕು ಘಟಕದ ವತಿಯಿಂದ ಶನಿವಾರ ತಹಶೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಎಸ್.ಮೈಕಲ್ ನಾಡಾರ್ ಮಾತನಾಡಿ, ತಾಲ್ಲೂಕಿನ ಬಹುತೇಕ ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೆ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ನಾವೆಲ್ಲಾ ಪಟ್ಟಣದಲ್ಲಿ ಸ್ವಂತ ಮನೆಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಬಾಡಿಗೆ ಕಟ್ಟುವುದು ಸಹ ಕಷ್ಟಕರವಾಗಿದೆ. ಪಟ್ಟಣದಲ್ಲಿ ಜಮೀನು ಗುರ್ತಿಸಿ ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೂರ್ಯಮಿತ್ರ ಪತ್ರಿಕೆಯ ಸಂಪಾದಕ ಕೆ.ಎ.ಶ್ರೀರಾಮುಲು, ಪತ್ರಕರ್ತರಾದ ನಿರಂಜನ್ ಕುಮಾರ್ ಎನ್, ಕಾವೇರಿ ಟಿ.ವಿ.ಕುಮಾರ್, ಈನಾಡು ಮಲ್ಲಿಕಾರ್ಜುನ್, ರಾಮಪ್ಪ, ನಂದೀಶ್ ನಾಯ್ಕ್, ನವೀನ್ ರಾಜವಂತಿ ಹಾಜರಿದ್ದರು.
