ಉದಯವಾಹಿನಿ ದೇವರಹಿಪ್ಪರಗಿ: ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರೀಕನೂ ದುಶ್ಚಟಗಳಿಂದ ದೂರವಿರಬೇಕೆಂದು ನಿಂಬೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಅಶೋಕ ಅಲ್ಲಾಪುರ ಸಲಹೆ ನೀಡಿದರು.ಪಟ್ಟಣದ ಶ್ರೀ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿಂದಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ವಿಜಯಪುರ ಅವರ ಸಯುಕ್ತ ಆಶ್ರಯದಲ್ಲಿ ನಡೆದ 154ನೇ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಮದ್ಯಪಾನ, ಧೂಮಪಾನ ಮುಂತಾದ ದುಶ್ಚಟಗಳಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ, ಆರೋಗ್ಯ ಹಾಗೂ ಮಾನಸಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವ ಮೂಲಕ ಗಾಂಧೀಜಿಯವರ ಕನಸನ್ನು ನನಸಾಗಿಸಬೇಕು. ಪಾನಮುಕ್ತ ದೇಶ ಕಟ್ಟುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮನಃಪರಿವರ್ತನೆಯಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಂದಗಿ ತಾಲೂಕ ಯೋಜನಾಧಿಕಾರಿಗಳಾದ ಗಿರೀಶಕುಮಾರ ಎಂ ಮಾತನಾಡಿ,ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಉತ್ತಮ ಮನಸ್ಸುಗಳು ಹಾಗೂ ಕೈಗಳು ಮುಖ್ಯ. ಪ್ರತಿಯೊಂದು ಕುಟುಂಬವು ಸುಭಿಕ್ಷವಾಗಿದ್ದು, ಆರ್ಥಿಕ, ಶೈಕ್ಷಣಿಕ, ಆರೋಗ್ಯವಂತ ಕುಟುಂಬವಾಗಿರಬೇಕಾದರೆ ದುಶ್ಚಟ, ದುರಭ್ಯಾಸಗಳಿಂದ ದೂರವಾಗಿರಬೇಕು, ಗಾಂಧೀಜಿಯವರ ಕನಸಿನ ರಾಮರಾಜ್ಯ ಕಲ್ಪನೆಯಾದ ಗ್ರಾಮಗಳ ಅಭಿವೃದ್ಧಿಗೆ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವಿರತವಾಗಿ ಶ್ರಮಿಸುತ್ತಿದ್ದಾರೆ, ಸಮಾಜದಲ್ಲಿ ದುಶ್ಚಟಗಳಿಂದ ದೂರವಿರಲು ಸ್ವಸ್ಥ ಸಂಕಲ್ಪ ಜನ ಜಾಗೃತಿ ಕಾರ್ಯಕ್ರಮಗಳನ್ನು ಸಂಘದಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯರಾದ ಪಂಚಾಕ್ಷರಿ ಮಿಂಚನಾಳ ಅವರು ಮಾತನಾಡಿ, ಮಹಿಳೆಯರು ಕೇವಲ ಆರ್ಥಿಕವಾಗಿ ಸಬಲರಾಗದೆ, ಶೈಕ್ಷಣಿಕ, ಸಾಮಾಜಿಕವಾಗಿಯೂ ಸಬಲರಾಗಿ ಕುಟುಂಬವು ಸಂಪೂರ್ಣವಾಗಿ ದುಶ್ಚಟಗಳಿಂದ ದೂರವಿರುವಂತಹ ವಾತಾವರಣ ಉಂಟುಮಾಡಬೇಕೆಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟಣದ ಸದಯ್ಯನ ಮಠದ ಷ.ಬ್ರ. ವೀರಗಂಗಾಧರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಿಎಸ್ಐ ಬಿ.ಎ.ತಿಪ್ಪಾರೆಡ್ಡಿ, ಅತಿಥಿಗಳಾಗಿ ಪ ಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಶ್ರೀ ಕಲ್ಮೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಸಂಗನಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ.ಎಚ್.ವಾಲಿಕಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಚನ್ನವೀರಪ್ಪ ಕುದುರಿ, ಜಂಗಮ ಸಮಾಜದ ತಾಲೂಕು ಘಟಕದ ಅಧ್ಯಕ್ಷರಾದ ಸೋಮು ಹಿರೇಮಠ ಅವರು ಮಾತನಾಡಿ, ಪಾನಮುಕ್ತ ದೇಶ ನಿರ್ಮಾಣ ಗಾಂಧೀಜಿಯವರ ಕನಸಾಗಿದ್ದು, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದರು.ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಗಣ್ಯರು, ಶಿಕ್ಷಕರು, ನವ ಜೀವನ ಸಮಿತಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸಮಿತಿಯ ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!