
ಉದಯವಾಹಿನಿ, ದೇವರಹಿಪ್ಪರಗಿ: ಅತ್ತಿಬೆಲೆ ದುರಂತದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಪಟಾಕಿ ಅಂಗಡಿಗಳ ಮೇಲೆ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಪ ಪಂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರ ನೇತೃತ್ವದಲ್ಲಿ ಪ.ಪಂ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿ ವರ್ಗದವರಿಂದ ದಾಳಿ ಮಾಡಿ ಅಂದಾಜು 50ಸಾವಿರಕ್ಕೂ ಹೆಚ್ಚು ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಯಿತು.ಇತ್ತೀಚೆಗೆ ಪಟಾಕಿ ದುರ್ಘಟನೆಯಿಂದ ಸುಮಾರು 14ಜನರು ಸಾವನ್ನಪ್ಪಿದ್ದರು. ಘಟನೆಯಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಆದೇಶಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಸುಮಾರು 4ಅಂಗಡಿಗಳ ಮೇಲೆ ದಾಳಿ ಮಾಡಿ ಪ್ರತಿ ಅಂಗಡಿಗೆ 5ಸಾವಿರ ರೂ ದಂತೆ ಒಟ್ಟು 20ಸಾವಿರ ರೂಪಾಯಿ ದಂಡ ವಿಧಿಸಿ, ಅಂದಾಜು 50ಸಾವಿರಕ್ಕೂ ಹೆಚ್ಚು ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಯಿತು. ಹಲವು ಅಂಗಡಿಗಳಲ್ಲಿ ಪಟಾಕಿ ಮಾರಾಟದ ಬಿಲ್ಲು ಹಾಗೂ ಪರವಾನಿಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ, ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು, ಹಬ್ಬಗಳು, ರಾಜಕೀಯ ಕಾರ್ಯಕ್ರಮಗಳಲ್ಲಿ ಸಿಡಿಮದ್ದು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಕಿನ ಹಬ್ಬ ದೀಪಾವಳಿ ಹಬ್ಬದಂದು ಮಾತ್ರ ಪರಿಸರ ಸ್ನೇಹಿಯಾದ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಸಲಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಸೇರಿದಂತೆ ಪೋಲೀಸ್ ಇಲಾಖೆ ಹಾಗೂ ಪ.ಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
