ಉದಯವಾಹಿನಿ, ಮೈಸೂರು : ಗಜಪಡೆಯ ಹೊಸ ಅತಿಥಿಗಳಾದ ಸುಗ್ರೀವ, ಹಿರಣ್ಯ, ರೋಹಿತ, ಪ್ರಶಾಂತ ಆನೆಗಳೊಟ್ಟಿಗೆ ಧನಂಜಯನೂ ಸಹ ಬೆಚ್ಚಿ ಘೀಳಿಟ್ಟಿತು. ಇತ್ತ ಮೊದಲ ಬಾರಿ ಬಂದಿದ್ದರೂ ಕಂಜನ್, ಅರ್ಜುನ, ಅಭಿಮನ್ಯು ಮೊದಲಾದವರೊಟ್ಟಿಗೆ ಸೇರಿ ಶಾಂತವಾಗಿ ನಿಂತು ದೈರ್ಯ ತೋರಿದವು.
ಹೌದು ಜಂಬೂ ಸವಾರಿ ಉದ್ಘಾಟನೆ ವೇಳೆ ಕುಶಾಲತೋಪು ಸಿಡಿಸುವ ಹಿನ್ನೆಲೆಯಲ್ಲಿ ಗಜಪಡೆಗಳಿಗೆ ಸಿಡಿಮದ್ದಿನ ಅನುಭವ ನೀಡುವ ಉದ್ದೇಶದಿಂದ ಆಯೋಜಿಸಿದ್ದ ಮೊದಲ ತಾಲೀಮಿನಲ್ಲಿ ಕಂಡ ದೃಶ್ಯವಿದು. ಗಜಪಡೆ ಹಾಗೂ ಅಶ್ವದಳಕ್ಕೆ ಭಾರೀ ಶಬ್ದದ ಪರಿಚಯ ಮಾಡಿಸುವ ಸಲುವಾಗಿ ಮೊದಲ ಸುತ್ತಿನ ಸಿಡಿಮದ್ದು ತಾಲೀಮು ಬುಧವಾರ ವಸ್ತುಪ್ರದರ್ಶನದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಹೊಸ ಆಚನೆಗಳು ವಿಚಲಿತವಾದರೆ, ಅನುಭವಿ ಆನೆಗಳು ಧೈರ್ಯ ಪ್ರದರ್ಶಿಸಿದವು.
ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ 43 ಆಶ್ವಗಳಿಗೆ 7 ಪಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಲತೋಪು ಸಿಡಿಸುವ ಮೂಲಕ ಭಾರಿ ಶಬ್ಧದ ಪರಿಚಯ ಮಾಡಿಸಲಾಯಿತು. ತಾಲೀಮಿನಲ್ಲಿ ಗಜಪಡೆಯ 14 ಆನೆಗಳು ಹಾಗೂ ಅಶ್ವಾರೋಹಿ ದಳದ 43 ಕುದುರೆಗಳು ಪಾಲ್ಗೊಂಡಿದ್ದವು. ತಾಲೀಮಿಗೂ ಮುನ್ನ ಡಿಸಿಪಿ ಮುತ್ತುರಾಜ್ ಅವರಿಂದ ಕುಶಾಲತೋಪು ಸಿಡಿಸುವ ಕಾರ್ಯ ನಿರ್ವಹಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅನುಮತಿ ಪಡೆದು ವಿಷಲ್ ಊದಿದರು. ಅದರೊಂದಿಗೆ ಕುಶಾಲತೋಪು ತಾಲೀಮು ವಿದ್ಯುಕ್ತವಾಗಿ ಆರಂಭವಾಯಿತು. ಸಿಡಿಮದ್ದು ಸಿಡಿಯುತ್ತಿದ್ದಂತೆ ಮೊದಲ ಸಾಲಿನಲ್ಲಿ ನಿಂತಿದ್ದ ಅಭಿಮನ್ಯು, ಅರ್ಜುನ, ವಿಜಯಾ, ವರಲಕ್ಷ್ಮಿ, ಭೀಮ, ಗೋಪಿ, ಕಂಜನ್, ಮಹೇಂದ್ರ ಆನೆಗಳು ಭಾರೀ ಶಬ್ದಕ್ಕೆ ಕದಲದೆ ನಿಂತಿದ್ದವು. ಇದೇ ಮೊದಲ ಬಾರಿ ದಸರೆಗೆ ಬಂದಿರುವ ಕಂಜನ್ ಕೂಡ ಕದಲದಿರುವುದು ವಿಶೇಷವಾಗಿತ್ತು. ಮೊದಲ ಸುತ್ತಿನ ಸಿಡಿಮದ್ದಿನ ಸದ್ದಿಗೆ ಬೆಚ್ಚಿದರೂ ನಂತರ ಧೈರ್ಯ ಪ್ರದರ್ಶಿಸಿದ.

Leave a Reply

Your email address will not be published. Required fields are marked *

error: Content is protected !!