ಉದಯವಾಹಿನಿ, ಭಾಲ್ಕಿ: ಬೀದರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಅವರು ಭಾಲ್ಕಿಯ ಹಿರೇಮಠದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ದರ್ಶನ ಮಾಡಿ ಆಶೀರ್ವಾದ ಪಡೆದರು. ಉಭಯ ಪೂಜ್ಯರು ಶಿಲ್ಪಾ ಎಂ. ಅವರಿಗೆ ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೂಜ್ಯರು ಗಡಿಭಾಗದಲ್ಲಿ ಮಾಡುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯ ಅಭಿನಂದನೀಯವಾಗಿದೆ. ಶ್ರೀಮಠದಲ್ಲಿ ಬಡಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡುವ ಮೂಲಕ ಅವರ ಬಾಳಿನ ಬೆಳಕಾಗಿದ್ದಾರೆ. ಅನಾಥ ಮಕ್ಕಳ ಆರೈಕೆ ಮಾಡುತ್ತಿರುವ ಪೂಜ್ಯರು ನಿಜಕ್ಕೂ ಮಾತೃಹೃದಯಿಗಳಾಗಿದ್ದಾರೆ. ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರಾರಂಭಿಸುವ ಮೂಲಕ ಈ ಭಾಗದ ಪ್ರತಿಭಾವಂತ ಮಕ್ಕಳಿಗೆ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಾಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲಿಕ್ಕೆ ಸಾಧ್ಯವಾಗಿದೆ. ಅಷ್ಟೆ ಅಲ್ಲದೆ ಅವರ ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಂಡು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಪೂಜ್ಯರ ಸೇವೆಯೇ ಅದಕ್ಕೆ ಮೂಲ ಕಾರಣ ಎಂದು ಅಭಿಮಾನದಿಂದ ಹೇಳಬಯಸುತ್ತೇವೆ.ಈ ಸಂದರ್ಭದಲ್ಲಿ ಅವರ ತಂದೆ ತಾಯಿ ಅವರು ಜೊತೆಗಿದ್ದು ಅವರು ಕೂಡ ಪೂಜ್ಯರಿಂದ ಆಶೀರ್ವಾದ ಪಡೆದುಕೊಂಡರು. ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೋಹಿತ ವೈರಾಗೆ, ಶ್ರೀಕಾಂತ ವೈರಾಗೆ ಅವರು ಜೊತೆಯಲ್ಲಿದ್ದರು.
