ಉದಯವಾಹಿನಿ, ಬೀದರ್: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಅವಸರದಹಳ್ಳಿಯ ರೈತ ಕುಟುಂಬದ ಯುವಕ ರಾಘವೇಶ ಎ.ಎನ್., ‘ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಅಂಡ್ ಅನಿಮಲ್ ಹಸ್ಬಂಡರಿ ಕೋರ್ಸ್’ನಲ್ಲಿ (ಬಿವಿಎಸ್ಸಿ ಅಂಡ್ ಎಎಚ್) ಒಟ್ಟು 16 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.ಇಷ್ಟೇ ಅಲ್ಲ, ಕೃಷಿ ವಿಜ್ಞಾನಿಯಾಗಿ ಕೃಷಿಗೆ ಹೊಸತನ ಕೊಟ್ಟು ರೈತರ ಆದಾಯ ದುಪ್ಪಟ್ಟು ಮಾಡಿ ಅವರ ಬದುಕು ಹಸನುಗೊಳಿಸಬೇಕೆಂಬ ತಂದೆಯ ಆಸೆಯನ್ನು ಈ ಮೂಲಕ ಈಡೇರಿಸಿದ ಸಂತೃಪ್ತಿ ರಾಘವೇಶ ಅವರದು.
ರಾಘವೇಶ ಅವರು ಬೀದರ್‍ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಗದಗ ಪಶು ವೈದ್ಯಕೀಯ ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಬಿವಿಎಸ್ಸಿ ಮತ್ತು ಎ.ಎಚ್. ಕೋರ್ಸ್ ಮುಗಿಸಿದ್ದಾರೆ. 16 ವಿವಿಧ ವಿಷಯಗಳಲ್ಲಿ ತಲಾ ಒಂದೊಂದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಇವರಿಗೆ ಸೋಮವಾರ (ಅ.16) ವಿಶ್ವವಿದ್ಯಾಲಯದಲ್ಲಿ ನಡೆದ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
ರಾಘವೇಶ ಮಂಡ್ಯ ತಾಲ್ಲೂಕಿನ ಮದ್ದೂರಿನವರು. ಇವರ ಕುಟುಂಬದ ಮುಖ್ಯ ಕಸುಬು ಕೃಷಿ. ತಂದೆ-ತಾಯಿ ಇಬ್ಬರೂ ಕೃಷಿಕಾರರು. ರಾಘವೇಶ ಅವರಿಗೆ ಆರಂಭದಿಂದಲೂ ಎಂಬಿಬಿಎಸ್ ಮಾಡಿ, ವೈದ್ಯನಾಗಬೇಕೆಂಬ ಆಸೆ ಇತ್ತು. ಆದರೆ, ತಂದೆಗೆ ಮಗ ಕೃಷಿ ವಿಜ್ಞಾನಿ ಆಗಿ ನೋಡಬೇಕೆಂಬ ಹಂಬಲ ಇತ್ತು. ರಾಘವೇಶಗೆ ಎಂಬಿಬಿಎಸ್ ಸೀಟು ಸಿಗದ ಕಾರಣ ಅವರು ಬಿವಿಎಸ್ಸಿ ಮತ್ತು ಎಎಚ್ ಆಯ್ಕೆ ಮಾಡಿಕೊಂಡು, ಅದರಲ್ಲಿ ಹಿರಿದಾದ ಸಾಧನೆ ಮಾಡಿದ್ದಾರೆ.ಮದ್ದೂರಿನಲ್ಲಿ ಎಸ್ಸೆಸ್ಸೆಲ್ಸಿ, ಕೆ.ಎಂ. ದೊಡ್ಡಿಯ ಭಾರತಿ ಕಾಲೇಜಿನಲ್ಲಿ ಪಿಯ ಪೂರ್ಣಗೊಳಿಸಿದ ನಂತರ ಗದಗ ಪಶು ವೈದ್ಯಕೀಯ ಕಾಲೇಜು ಸೇರಿದರು. ಐದುವರೆ ವರ್ಷಗಳ ಕೋರ್ಸ್ ಪೂರ್ಣಗೊಳಿಸಿದ ನಂತರ, ಉತ್ತರ ಪ್ರದೇಶದ ಬರೇಲಿಯ ‘ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‍ಸ್ಟಿಟ್ಯೂಟ್’ನಲ್ಲಿ ಸ್ನಾತಕೋತ್ತರ ವೈರಾಣುಶಾಸ್ತ್ರ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ.
