ಉದಯವಾಹಿನಿ, ಬಳ್ಳಾರಿ: ಸ್ವಾಭಿಮಾನದ ರಾಷ್ಟ್ರ ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸಿದವರು ಛತ್ರಪತಿ ಶಿವಾಜಿ ಮಹಾರಾಜರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಶೌರ್ಯ,ಸಾಹಸ ಪರಿಚಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪುಣೆಯ ಹತ್ತಿರ ಇರುವ ಮಾಳವ ಗುಡ್ಡ ಗಾಡಿನಲ್ಲಿ ವಾಸಿಸುತ್ತಿದ್ದ ಗಿರಿಜನರನ್ನು ಕರೆತಂದು, ತರಬೇತಿ ನೀಡಿ ತನ್ನ ಸೈನ್ಯ ಬಲವನ್ನು ಹೆಚ್ಚಿಸಿಕೊಂಡರು.
ಶತ್ರು ಸೈನ್ಯ ಎಷ್ಟೇ ಬಲಾಢ್ಯವಾಗಿದ್ದರೂ ಗೊರಿಲ್ಲಾ ಯುದ್ಧ ತಂತ್ರದಿಂದ ಸೋಲಿಸುವ ಹಾಗೂ ಹಿಮ್ಮೆಟ್ಟಿಸುವ ಕಲೆ ಮೈಗೂಡಿಸಿಕೊಂಡಿದ್ದರು.
ಚಿಕ್ಕಂದಿನಲ್ಲಿ ತಮ್ಮ ತಾಯಿ ಹಾಗೂ ಗುರುಗಳಾದ ದಾದಾಜಿ ಕೊಂಡದೇವರಾಯ ಅವರಿಂದ ಪಡೆದ ಕ್ರಮ ಶಿಕ್ಷಣ ಅವರನ್ನು ಆದರ್ಶ ದೇಶಾಭಿಮಾನಿ ಆಗುವಂತೆ ಮಾಡಿತು.
ಮರಾಠ ಸಾಮ್ರಾಜ್ಯ ಸ್ಥಾಪಿಸುವ ಮೂಲಕ 1674ರಲ್ಲಿ ಪಟ್ಟಾಭಿಷೇಕವನ್ನು ವಹಿಸಿ ಕೊಂಡು ರಾಯಗಡ ಸುತ್ತಮುತ್ತಲಿನ ಕೋಟೆಗಳನ್ನು ವಶಪಡಿಸಿಕೊಂಡರು.ತಮ್ಮ ಆಡಳಿತದ ಅವಧಿಯಲ್ಲಿ ಬಿಜಾಪುರ ಆದಿಲ್ ಶಾಹಿ ಹಾಗೂ ಮೊಗಲರ ವಿರುದ್ಧ ಹಲವಾರು ಸಾರಿ ಯುದ್ಧಗಳನ್ನು ಮಾಡಿ ಜಯಗಳಿಸಿ ಶೌರ್ಯ, ಸಾಹಸ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲು ಗುರು.ಆದ್ದರಿಂದ ಪ್ರತಿ ತಾಯಂದಿರು ಮನೆಯಲ್ಲಿ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಹಾಗೂ ದೇಶಾಭಿಮಾನದ ಗುಣಗಳನ್ನು ಬೆಳಸಲು ಪ್ರಯತ್ನಿಸಬೇಕೆಂದು ಹೇಳಿದರು.
ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಲತಾ, ಮಿಂಚೇರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ.ಎಂ.ಸಿ.ಅಧ್ಯಕ್ಷ ಮಾಬು ಬಾಷ,ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ ಮುಂತಾದವರು ಉಪಸ್ಥಿತರಿದ್ದರು.
