ಉದಯವಾಹಿನಿ, ನವದೆಹಲಿ: ಚಂದ್ರಯಾನ ಕೈಗೊಳ್ಳುವ ಮೂಲಕ ಇತಿಹಾಸ ಬರೆದ ಬೆನ್ನಲ್ಲೇ ಸೂರ್ಯನ ಅಧ್ಯಯನ ಕೈಗೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೊ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇದೇ ೨೧ ರಂದು ಗಗನ್‌ಯಾನ ಪರೀಕ್ಷಾ ವಾಹನದ ಮೊದಲ ಹಾರಾಟ ಪ್ರಾರಂಭಿಸಲಿದೆ
ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ ( ಟಿವಿ-ಡಿ೧ ) ಮುಂದಿನ ವರ್ಷದ ಕೊನೆಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನದ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಹೊತ್ತೊಯ್ಯುವ ಸಿಬ್ಬಂದಿ ಮಾಡ್ಯೂಲ್ ಅನ್ನು ಪರೀಕ್ಷಿಸುವ ಗುರಿ ಹೊಂದಿದೆ.
ಇದೇ ೨೧ ರಂದು ಬೆಳಿಗ್ಗೆ ೮ಗಂಟೆಗೆ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಪರೀಕ್ಷಾ ವಾಹನ ಉಡಾವಣೆ ಮಾಡುವ ಮೂಲಕ ಗಗನಯಾನ ಮಾನವ ಬಾಹ್ಯಾಕಾಶ ಯಾನಕ್ಕಾಗಿ ಮಾನವರಹಿತ ಹಾರಾಟದ ಪರೀಕ್ಷೆ ಪ್ರಾರಂಭಿಸುವುದಾಗಿ ಇಸ್ರೊ ಹೇಳಿದೆ.
ಇದು ಅಲ್ಪಾವಧಿಯ ಮಿಷನ್ ಆಗಿರುತ್ತದೆ ಮತ್ತು ಲಾಂಚ್ ವ್ಯೂ ಗ್ಯಾಲರಿಯಿಂದ ಗೋಚರತೆ ಸೀಮಿತವಾಗಿರುತ್ತದೆ ಎಂದು ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.
ಗಗನ ಯಾನ ಯೋಜನೆ ಮಾನವ ಸಿಬ್ಬಂದಿಯನ್ನು ೪೦೦ ಕಿಮೀ ಕಕ್ಷೆಗೆ ಉಡಾಯಿಸುವ ಮೂಲಕ ಮತ್ತು ಬಂಗಾಳ ಕೊಲ್ಲಿ ಸಮುದ್ರದ ನೀರಿನಲ್ಲಿ ಇಳಿಯುವ ಮೂಲಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವ ಮೂಲಕ ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟದ ಸಾಮಥ್ರ್ಯದ ಪ್ರದರ್ಶನ ಮಾಡಲು ಮುಂದಾಗಿದೆ.
ಉಡಾವಣೆಗೆ ಸಮಯ ನಿಗದಿ: ಗಗನ ಯಾನದ ಪರೀಕ್ಷಾರ್ಥ ಹಾರಾಟಕ್ಕೆ ಇದೇ ೨೧ ರಂದು ಮುಹೂರ್ತ ನಿಗಧಿ ಮಾಡಿದ್ದೇವೆ ಎಂದು ಇಸ್ರೊ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ.
ಇದು ಪರೀಕ್ಷಾ ವಾಹನ ಎಂಬ ಹೊಸ ರಾಕೆಟ್ ಅನ್ನು ಬಳಸಿಕೊಂಡು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್‌ನ ಪರೀಕ್ಷೆಯಾಗಿದೆ. ಇದು ದ್ರವ ಎಂಜಿನ್ ಚಾಲಿತ ರಾಕೆಟ್ ಆಗಿದೆ ಎಂದು ಅವರು ಹೇಳಿದ್ದಾರೆ
ಗಗನ್‌ಯಾನ ಮಿಷನ್‌ನ ಪ್ರಗತಿ ಮತ್ತು ಭಾರತದ ಬಾಹ್ಯಾಕಾಶ ಪರಿಶೋಧನಾ ಪ್ರಯತ್ನಗಳ ಭವಿಷ್ಯದ ರೂಪುರೇಷೆಗಾಗಿ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರಿಗೆ ಮನವರಿಕೆ ಮಾಡಿಕೊಟ್ಟ ನಂತರ ಈ ವಿಷಯ ತಿಳಿಸಿದ್ದಾರೆ.
