ಉದಯವಾಹಿನಿ, ಗ್ಯಾಂಗ್ಟಕ್ (ಸಿಕ್ಕಿಂ) : ಸಿಕ್ಕಿಂನಲ್ಲಿ ಉಂಟಾಗಿದ್ದ ಮೇಘಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಕ್ಕಿಂ ಸರ್ಕಾರ, ಸದ್ಯ 76 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದೆ. ಕಳೆದ ಅಕ್ಟೋಬರ್​ 2ರಂದು ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿತ್ತು. ಮೇಘಸ್ಫೋಟದಿಂದಾಗಿ ಇಲ್ಲಿನ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಅಪಾರ ಪ್ರಮಾಣ ಹಾನಿ ಸಂಭವಿಸಿತ್ತು. ಪ್ರವಾಹದಿಂದಾಗಿ ಇಲ್ಲಿನ ಕಾಲು ಸೇತುವೆಗಳು, ಸೇತುವೆಗಳು, ರಸ್ತೆ ಮಾರ್ಗಗಳು ಕೊಚ್ಚಿಹೋಗಿದ್ದವು. ಜೊತೆಗೆ ಸುಮಾರು 100ಕ್ಕೂ ಮಂದಿ ನಾಪತ್ತೆಯಾಗಿದ್ದರು.

ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, ಮೇಘಸ್ಫೋಟದಿಂದಾಗಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದಾರೆ. 76 ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ 4418 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಹೇಳಿದೆ. ಇದುವರೆಗೆ ಮಂಗನ್​ ಜಿಲ್ಲೆಯಿಂದ 2,705 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಗ್ಯಾಂಗ್ಟಕ್​ನಿಂದ 1025 ಮಂದಿ, ಪ್ಯಾಕೋಂಗ್​ ಜಿಲ್ಲೆಯಲ್ಲಿ 58 ಮಂದಿ, ನಾಮ್ಚಿ ಜಿಲ್ಲೆಯಲ್ಲಿ 630 ಮಂದಿಯನ್ನು ಸ್ಥಳಾಂತರಿಸಲಾಗಿದೆ. 40 ಸಾವುಗಳಲ್ಲಿ ಪ್ಯಾಕೋಂಗ್​ ಜಿಲ್ಲೆಯೊಂದರಲ್ಲೇ 15 ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದೆ.ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಒಟ್ಟು 19 ನಿರಾಶ್ರಿತ ಶಿಬಿರಗಳಲ್ಲಿ ನಾಲ್ಕು ಜಿಲ್ಲೆಯ 1852 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಇದಕ್ಕೂ ಮುನ್ನ ಸಿಕ್ಕಿಂ ಸರ್ಕಾರ ನೋಂದಣಿ ಮಾಡಲ್ಪಟ್ಟಿರುವ ಕಟ್ಟಡ ಕಾರ್ಮಿಕರಿಗೆ 10 ಸಾವಿರ ರೂ ಪರಿಹಾರ ಧನ ಘೋಷಿಸಿತ್ತು. ಒಟ್ಟು 8733 ಕಾರ್ಮಿಕರಿಗೆ ಈ ಪರಿಹಾರಧನ ನೀಡಲಾಗಿದೆ.ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್​ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭದ್ರತಾ ಸಿಬ್ಬಂದಿ ಹಾನಿಗೊಳಗಾಗಿರುವ ರಸ್ತೆ ಮಾರ್ಗಗಳು, ಸೇತುವೆಗಳ ಪುನರ್ನಿಮಾಣ ಮಾಡುವ ಕೆಲಸ ಮಾಡುತ್ತಿದೆ. ಈ ಮೂಲಕ ಜಿಲ್ಲೆಗಳಲ್ಲಿ ಮತ್ತೆ ಸಂಪರ್ಕ ಸಾಧಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಪುನರ್​ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!