ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ ವಾರ್ಡ ನಂ-16ರಲ್ಲಿ ಮೆದುಳು ಜ್ವರ ಪತ್ತೆಯಾಗಿದ್ದು, ಪಟ್ಟಣದಲ್ಲಿ ಆತಂಕ ಮನೆಮಾಡಿದೆ. 5 ವರ್ಷ ಬಾಲಕನಿಗೆ ಮೆದುಳು ಜ್ವರ ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಂದ ಬಾಲಕನಿಗೆ ಚಿಕಿತ್ಸೆ ನೀಡಲಾಗ್ತಿದೆ.ಆರಂಭದಲ್ಲಿ ಬಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ವಿಜಯಪುರದ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಿಸಿದ್ದಾಗ ವೈದ್ಯರ ಪರೀಕ್ಷೆಯಲ್ಲಿ ಮೆದುಳು ಜ್ವರ ಇರೋದು ಪತ್ತೆಯಾಗಿದೆ.ಸಧ್ಯ ಬಾಲಕನಿಗೆ ನಿರಂತರ ಚಿಕಿತ್ಸೆ ನೀಡಲಾಗ್ತಿದ್ದು ಮುಂಜಾಗ್ರತಾ ಕ್ರಮ ಸಹ ತೆಗೆದುಕೊಳ್ಳಲಾಗಿದೆ.ಬಾಲಕನ ಮನೆಗೆ ವಿಜಯಪುರ ಜಿಲ್ಲೆಯ ಮಲೇರಿಯಾ ನಿಯಂತ್ರಣ ಅಧಿಕಾರಿಗಳಾದ ಡಾ.ಜೈಬುನಿಸ್ಸಾ ಬೀಳಗಿ ಭೇಟಿ ನೀಡಿ ಮುಂಜಾಗ್ರತ ಕ್ರಮಗಳ ಕುರಿತು ಆರೋಗ್ಯ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೆದುಳು ಜ್ವರ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಒಂದು ವೇಳೆ ಹಂದಿಗಳಲ್ಲಿ ವೈರಾಣು ಇದ್ದರೆ ಅದಕ್ಕೆ ಕಚ್ಚಿದ ಸೊಳ್ಳೆಗಳಿಂದ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರೋದ್ರಿಂದ ಪಟ್ಟಣ ಪಂಚಾಯಿತಿಯಿಂದಲೂ ಮುಂಜಾಗ್ರತಾ ಕ್ರಮ ಹಾಗೂ ಸ್ವಚ್ಛತೆ ಕೈಗೊಳ್ಳಲು ಸೂಚಿಸಲಾಗಿದೆ.ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಿ, ಸೋಂಕು ಹರಡದಂತೆ, ನೀರು ನಿಂತು ಸೊಳ್ಳೆಗಳ ಉತ್ಪತಿಗೆ ಅವಕಾಶ ನೀಡದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕ್ರಮ ಕೈಗೊಳ್ಳಲಾಗಿದೆ. 1 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಆರೋಗ್ಯ ಇಲಾಖೆಯಿಂದ ಮನವಿ ಮಾಡಿಕೊಳ್ಳಲಾಗುತ್ತಿದೆ, ಇನ್ನು ಮೆದುಳು ಸೋಂಕು ಪತ್ತೆಯಾದವರಿಗೆ ಪ್ರಮುಖವಾಗಿ ಕಂಡುವರುವ ಲಕ್ಷಣಗಳು. ಜ್ವರ, ಕುತ್ತಿಗೆ ಬಿಗಿಯುವುದು, ಕೋಮ, ಹೊಟ್ಟೆ ಹಸಿವು ಆಗದೆ ಇರೋದು, ಮೂರ್ಛೆ, ಮುಖದಲ್ಲಿ ಗುಳ್ಳೆಗಳು,ತಲೆನೋವು ಸೇರಿದಂತೆ ಇನ್ನಿತರ ರೋಗ ಲಕ್ಷಣಗಳು ಕಂಡುಬರಲಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಡಾ.ಸಂತೋಷ ಯಡಹಳ್ಳಿ, ಪ. ಪಂ.ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಸುದೇವ್ ಬಂಡಿ, ಪ್ರಭು ಜಂಗನಮಠ, ರಾಮನಗೌಡ ನೀರಲಗಿ, ಸುಕನ್ಯಾ ಚಳಗೇರಿ, ಡಿ.ಡಿ.ಪಾಟೀಲ, ಫಿರೋಜ್ ಮುಲ್ಲಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!