ಉದಯವಾಹಿನಿ, ಬೆಂಗಳೂರು: “ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಅಧಿಕಾರನೇ ಇಲ್ಲ. ಹಾಗಾಗಿ ಎಲ್ಲವನ್ನೂ ಕಾದುನೋಡುವುದೇ ಒಳಿತು” ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.ಇದೇ ವೇಳೆ ದಸರಾ ಹಬ್ಬದ ಶುಭಾಶಯ ತಿಳಿಸಿದ ಅವರು, ತಾಯಿ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಲಿ. ದುಷ್ಟ ಶಕ್ತಿಗಳ ಸಂಹಾರ ಆಗಲಿ. ಸೃಷ್ಟಿ ಶಕ್ತಿಗಳು ಭಾರತ ದೇಶದಲ್ಲಿ ತಲೆ ಎತ್ತಲಿ” ಎಂದರು.
“ಶೇ 100ರಷ್ಟು ಟೆಕ್ನಿಕಲಿ, ಮೆಂಟಲಿ ನಾನು ಜೆಡಿಎಸ್‌ನಲ್ಲೇ ಇದ್ದೇನೆ. ನಾನೇ ಅದರ ಅಧ್ಯಕ್ಷ ಅಂತ ಹೇಳಿದ್ದೇನೆ. ರಾಜ್ಯ ಘಟಕ ವಿಸರ್ಜನೆ ಮಾಡುವುದಕ್ಕೆ ಬರಲ್ಲ. ದೇವೇಗೌಡರು ತಪ್ಪು ಮಾಡಿದ್ದಾರೆ ಎಂದು ನೋವು ಆಗಿಲ್ಲ. ಸರಿಪಡಿಸಿಕೊಂಡು ಹೋಗೋಣ. ಇದಕ್ಕೆ ಒಪ್ಪಿದರೆ ಒಟ್ಟಾಗಿ ಹೋಗಲು ಸಿದ್ಧ. ವಿಜಯದಶಮಿಯಲ್ಲಿ ಬನ್ನಿ ಹಂಚುವುದು ಪದ್ಧತಿ, ನನಗೆ ಬೇವು ಬೆಲ್ಲ ಎರಡೂ ಸಿಕ್ಕಿದೆ. ದೇವೇಗೌಡರು ಹಿರಿಯರು, ಅವರಿಗೆ ಇನ್ನೊಮ್ಮೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನಿಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ” ಎಂದು ಮನವಿ ಮಾಡಿದರು.
