ಉದಯವಾಹಿನಿ, ಇಸ್ಲಾಮಾಬಾದ್ : ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಗಡೀಪಾರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಂಡನ್‌ನಿಂದ 4 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ್ದಾರೆ.
ಇಸ್ಲಾಮಾಬಾದ್ನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಂದಿನ ಚುನಾವಣೆಯಲ್ಲಿ ಅವರು ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್ – ನವಾಜ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.ಮಾಜಿ ಕಾನೂನು ಸಚಿವ ಅಜಮ್ ತಾರಾರ್ ಮತ್ತು ಪಕ್ಷದ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತಕರು, ಬೆಂಬಲಿಗರು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಜೊತೆಗೆ ಪಕ್ಷದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ರ್‍ಯಾಲಿ ಕೂಡ ನಡೆಸಿದ್ದರು.
ಈ ಬಗ್ಗೆ ತನ್ನ ಅಧಿಕೃತ ಎಕ್ಸ್ನಲ್ಲಿ ಹಂಚಿಕೊಂಡಿರುವ ಪಿಎಂಎಲ್-ಎನ್ ಪಕ್ಷ, ‘ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ತಾಯ್ನಾಡಿಗೆ ಮರಳಿದ್ದಾರೆ. ಇನ್ನು ಮುಂದೆ ರಾಜಕೀಯದಲ್ಲಿ ಹೊಸ ಮನ್ವಂತರ ಶುರುವಾಗಲಿದೆ’ ಎಂದಿದೆ. 73 ವರ್ಷದ ಷರೀಫ್ ವಿರುದ್ಧ ಕೇಳಿಬಂದಿದ್ದ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಕೋರ್ಟ್ ಹೇಳಿತ್ತು. ಜೊತೆಗೆ 8 ಮಿಲಿಯನ್ ಯುರೋ ದಂಡದ ಜೊತೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ನವಾಜ್, ಮರಿಯಮ್ ಮತ್ತು ಕ್ಯಾಪ್ಟನ್ ಮುಹಮ್ಮದ್ ಸಫ್ದರ್ ಅವರನ್ನು ಬಂಧಿಸಲಾಗಿತ್ತು.
