ಉದಯವಾಹಿನಿ, ಇಸ್ಲಾಮಾಬಾದ್: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ತಮ್ಮ ಸಾಮರ್ಥ್ಯ ರುಜುವಾತು ಪಡಿಸಲು ಸಮಾನ ಅವಕಾಶ ದೊರೆಯಲಿದೆ ಎಂದು ಹೇಳಿರುವ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ‘ಚುನಾವಣಾ ಆಯೋಗವು ಶೀಘ್ರವೇ ಚುನಾವಣಾ ದಿನಾಂಕ ಘೋಷಿಸಲಿದೆ’ ಎಂದು ಹೇಳಿದರು.ಚೀನಾದಲ್ಲಿ ನಡೆದ ‘ಬೆಲ್ಟ್ ಆಯಂಡ್ ರೋಡ್ ಫೋರಂ’ನ (ಬಿಆರ್‌ಎಫ್) 10ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ದೇಶಕ್ಕೆ ಮರಳಿದ ಮೂರು ದಿನಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯದಲ್ಲಿಯೇ ಚುನಾವಣಾ ದಿನಾಂಕ ಪ್ರಕಟವಾಗಲಿದೆ’ ಎಂದರು.
‘ಯಾವುದೇ ರಾಜಕೀಯ ಪಕ್ಷವನ್ನು ರಾಜಕೀಯ ಪ್ರಕ್ರಿಯೆಯಿಂದ ಹೊರಗಿಡಲಾಗಿಲ್ಲ ಮತ್ತು ಚುನಾವಣಾ ಪ್ರಕ್ರಿಯೆಗೆ ನೆರವಾಗಲು ಹಂಗಾಮಿ ಸರ್ಕಾರವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಅವರು ಹೇಳಿದರು. ‘ಯಾವುದೇ ರಾಜಕೀಯ ಪಕ್ಷಗಳು ಅಥವಾ ಅವುಗಳ ನಾಯಕರು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದು ಬಯಸುತ್ತೇವೆ. ಆದರೆ ನ್ಯಾಯಾಲಯ ವಿಧಿಸುವ ಯಾವುದೇ ನಿರ್ಬಂಧ, ಆದೇಶಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಅವರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷ ಎದುರಿಸುತ್ತಿರುವ ಕಾನೂನು ಸವಾಲುಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
