
ಉದಯವಾಹಿನಿ, ಯಾದಗಿರಿ: ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆ ಕುರಿತ ಎಲ್ಲಾ ರೈತರ ಸಂಪೂರ್ಣ ಮಾಹಿತಿಯನ್ನು ಮುಂದಿನ 10 ದಿನಗಳಲ್ಲಿ ಮುಗಿಸಿ “ಫ್ರೂಟ್ಸ್” (Fruits) ತಂತ್ರಾಂಶದಲ್ಲಿ ನಮೂದಿಸಿ, ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು.ಯಾದಗಿರಿಯಲ್ಲಿ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ರಾಜ್ಯ ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ” ಎಂದು ಕಿವಿಮಾತು ಹೇಳಿದರು. ಮುಂದುವರೆದು, “ಅಧಿಕಾರಿಗಳು ಯಾದಗಿರಿಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸಿದ್ದೀರಿ. 2015-16ರ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 2.30 ಲಕ್ಷ ರೈತರಿದ್ದಾರೆ. ಆದರೆ, 1.80 ಲಕ್ಷ ರೈತರ ಮಾಹಿತಿ ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಉಳಿದ 80 ಸಾವಿರ ರೈತರ ಬೆಳೆ ಮಾಹಿತಿ ಏಕೆ ಮಾಡಿಲ್ಲ? ಎಂದು ಸಚಿವರು ಕಿಡಿಕಾರಿದರು.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ಶೇ.95 ರಷ್ಟು ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆದರೆ, ಯಾದಗಿರಿಯಲ್ಲಿ ಮಾತ್ರ ಶೇ.77 ರಷ್ಟು ಮಾತ್ರ ನಮೂದಿಸಲಾಗಿದೆ. 80 ಸಾವಿರ ರೈತರ ಮಾಹಿತಿ ಇನ್ನೂ ಅಪ್ಡೇಟ್ ಆಗಿಲ್ಲ. ಅಧಿಕಾರಿಗಳು ಮಾಡುವ ತಪ್ಪಿಗೆ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮುಂದಿನ 10 ದಿನದಲ್ಲಿ ಶೇ.100 ರಷ್ಟು ರೈತರ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಬೇಕು” ಎಂದು ಗಡುವು ನೀಡಿದರು.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 93 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ 61 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದರೆ, 24 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಬಾಕಿ ಇದೆ. 08 ಗ್ರಾಮಗಳನ್ನು ಕೈಬಿಡಲಾಗಿದೆ. ಆದರೆ, ಅಂತಿಮ ಅಧಿಸೂಚನೆ ಹೊರಡಿಸದೆ ಫಲಾನುಭವಿಗಳಿಗೆ ಹೇಗೆ ಹಕ್ಕುಪತ್ರ ವಿತರಿಸಿದಿರಿ? ಎಂದು ಪ್ರಶ್ನಿಸಿದ ಸಚಿವರು, ಎಲ್ಲಾ ಅರ್ಹ ಗ್ರಾಮಗಳನ್ನು ಶೀಘ್ರ ಕಂದಾಯ ಗ್ರಾಮಗಳಾಗಿ ಘೋಷಿಸಿ, ಬಡವರ ಪರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು. -ಸಚಿವ ಕೃಷ್ಣ ಬೈರೇಗೌಡ
ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಯಾದಗಿರಿಯಲ್ಲಿ ಬಹುತೇಕ ಯಾವ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಳ್ಳದಿರಲು ಕಾರಣವೇನು? ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು. -ಸಚಿವ ಕೃಷ್ಣ ಬೈರೇಗೌಡ
ಯಾದಗಿರಿಗಿಂತ ಹಿಂದುಳಿದ ಜಿಲ್ಲೆಗಳಲ್ಲೂ ಸಹ ಈಗಾಗಲೇ ಶೇ.100ರಷ್ಟು ಇ-ಆಫೀಸ್ ಜಾರಿಯಾಗಿದೆ, ಇ-ಆಫೀಸ್ ಮೂಲಕವೇ ಎಲ್ಲಾ ಕಡತಗಳನ್ನೂ ವಿಲೇವಾರಿ ಮಾಡಲಾಗುತ್ತಿದೆ, ಹೀಗಾಗಿ ಎಲ್ಲಾ ಕೆಲಸಗಳೂ ವೇಗ ಪಡೆಯುತ್ತಿದ್ದು, ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತಿದೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ಇ-ಆಫೀಸ್ ಅನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
