ಉದಯವಾಹಿನಿ, ಚಿಕ್ಕಬಳ್ಳಾಪುರ: ಬೈಕ್ ರಿಪೇರಿ ಹಣದ ವಿಚಾರದಲ್ಲಿ ನಡೆದ ಗಲಾಟೆ ಬೈಕ್ ಮಾಲೀಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಗೌರಿಬಿದನೂರಿನ ಚನ್ನಬೈರನಹಳ್ಳಿಯಲ್ಲಿ ನಡೆದಿದೆ.
ಚನ್ನಬೈರನಹಳ್ಳಿಯ ಸತ್ಯನಾರಾಯಣ (೪೫) ಕೊಲೆಯಾದವರು.ಕೃತ್ಯ ನಡೆಸಿದ ಮೆಕ್ಯಾನಿಕ್ ಚೇತನ್ ಆತನ ಸ್ನೇಹಿತ ಜ್ವಾಲೇಂದ್ರ, ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಕಲ್ಲೋಡಿ ಎಂಬಲ್ಲಿ ಚೇತನ್ ಗ್ಯಾರೆಜ್ ನಡೆಸುತ್ತಿದ್ದ. ಈತನ ಬಳಿ ಹತ್ಯೆಗೀಡಾದ ಸತ್ಯನಾರಾಯಣ ಬೈಕ್ ರಿಪೇರಿ ಮಾಡಿಸಿ ಹಣ ಕೊಟ್ಟಿರಲಿಲ್ಲ. ತನಗೆ ಬರಬೇಕಿದ್ದ ಹಣದ ವಸೂಲಿಗೆ ಚೇತನ್ ಹಾಗೂ ಸ್ನೇಹಿತರು ಆತನ ಮನೆಯ ಬಳಿಗೆ ಹೋಗಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸತ್ಯನಾರಾಯಣ ದೊಣ್ಣೆಯಿಂದ ಚೇತನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಅದೇ ದೊಣ್ಣೆಯನ್ನು ಚೇತನ್‌ನ ಸ್ನೇಹಿತ ಜ್ವಾಲೇಂದ್ರ ಎಂಬಾತ ಕಸಿದುಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ದಾನೆ.
ಇದರಿಂದ ಸತ್ಯನಾರಾಯಣ ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಆತ ಸಾವಿಗೀಡಾಗಿದ್ದಾನೆ.
