ಉದಯವಾಹಿನಿ, ಗಾಜಾ: ಒಂದೆಡೆ ಇಸ್ರೇಲ್ ಸೇನಾಪಡೆ ಗಾಜಾ ಪಟ್ಟಿಯ ಮೇಲೆ ಭೀಕರ ರೀತಿಯಲ್ಲಿ ದಾಳಿ ನಡೆಸುತ್ತಿದ್ದರೆ ಮತ್ತೊಂದೆಡೆ ಅಲ್ಲಿ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಈ ನಡುವೆ ಗಾಜಾದಲ್ಲಿರುವ ‘ವಿಶ್ವಸಂಸ್ಥೆಯ ಫೆಲೆಸ್ತೀನೀಯನ್ ನಿರಾಶ್ರಿತರ ಏಜೆನ್ಸಿ (ಯುಎನ್‌ಆರ್‌ಡಡಬ್ಲ್ಯುಎ)ಯ ಗೋದಾಮು ಮತ್ತು ವಿತರಣಾ ಕೇಂದ್ರಕ್ಕೆ ನುಗ್ಗಿದ ಸಾವಿರಾರು ಸಂತ್ರಸ್ತ ಗಾಜಾ ನಿವಾಸಿಗಳು ಅಲ್ಲಿಂದ ದೈನಂದಿನ ಅಗತ್ಯದ ವಸ್ತುಗಳನ್ನು ಹೊತ್ತೊಯ್ದ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಗಾಜಾದಲ್ಲಿ ನಾಗರಿಕ-ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಹಿಟ್ಟು ಮತ್ತು ಸಾಬೂನಿನಂತಹ ಮೂಲಭೂತ ವಸ್ತುಗಳನ್ನು ಹೊಂದಿರುವ ಗೋದಾಮುಗಳನ್ನು ದೋಚಲಾಗಿದೆ ಎಂದು ಪ್ಯಾಲೆಸ್ಟೀನಿಯನ್ನರ ಯುಎನ್ ಪರಿಹಾರ ಸಂಸ್ಥೆ (ಯುಎನ್‌ಆರ್‌ಡಡಬ್ಲ್ಯುಎ) ಹೇಳಿದೆ. ಗಾಜಾದ ಮಧ್ಯ ಮತ್ತು ದಕ್ಷಿಣದಲ್ಲಿ ಸೇರಿದಂತೆ ಇತರ ಹಲವಾರು ಶೇಖರಣಾ ಸೌಲಭ್ಯಗಳಿಗೆ ನುಗ್ಗಿದ ನಾಗರಿಕರು ಹಿಟ್ಟು, ಗೋಧಿ ಮತ್ತು ನೈರ್ಮಲ್ಯ ಕಿಟ್‌ಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಕೆಲ ವಾರಗಳ ಹಿಂದೆ ಹಮಾಸ್‌ನ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿ ಆರಂಭಿಸಿದಂದಿನಿಂದ ಗಾಜಾಕ್ಕೆ ನೆರವು ಪೂರೈಕೆಗೆ ತೊಡಕಾಗಿದ್ದು ವಿಶ್ವಸಂಸ್ಥೆಯ ನೆರವು ಏಜೆನ್ಸಿಗಳು ಗಾಝಾದ ದೆಯರ್ ಅಲ್-ಬಲಾಹ್‌ನಲ್ಲಿರುವ ತನ್ನ ಗೋದಾಮುಗಳಿಗೆ ಈಜಿಪ್ಟ್ ಮೂಲಕ ಮಾನವೀಯ ನೆರವನ್ನು ಪೂರೈಸುತ್ತಿವೆ. ಇದೇ ಗೋದಾಮಿನಿಂದ ಅಗತ್ಯ ವಸ್ತುಗಳನ್ನು ದೋಚಲಾಗಿದೆ. ನೇರವಾಗಿ ನೆರವು ವಿತರಣೆ ಮೊಟಕುಗೊಂಡಿದೆ ಮತ್ತು ಈಜಿಪ್ಟ್ ಮೂಲಕ ಟ್ರಕ್ ಗಳಲ್ಲಿ ಪೂರೈಕೆಯಾಗುತ್ತಿರುವ ಅಂತಅರಾಷ್ಟ್ರೀಯ ನೆರವು ಸಾಕಾಗುತ್ತಿಲ್ಲ.
