ಉದಯವಾಹಿನಿ, ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದರೂ ವಿಪಕ್ಷಗಳು ಅನಗತ್ಯವಾಗಿ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಏನೂ ಮಾಡೇ ಇಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಅನಗತ್ಯ ಆರೋಪ ಮಾಡುತ್ತಿವೆ. ಇದು ಸರಿಯಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಈ ಸರ್ಕಾರ ನುಡಿದಂತೆ ನಡೆದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರದ ಪರ ಸದಾಭಿಪ್ರಾಯ ಮೂಡಿದೆ. ಹೀಗಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸಲು ಮುಂದಾಗಿರುವುದು ಆ ಪಕ್ಷಗಳ ಹತಾಶೆಯ ಸಂಕೇತವಾಗಿದೆ ಎಂದು ಅವರು ಟೀಕಿಸಿದ್ದಾರೆ.
