
ಉದಯವಾಹಿನಿ,ಶಿಡ್ಲಘಟ್ಟ : ಮೈಸೂರಿನ ದಸರಾ ಉತ್ಸವದಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಗಳಲ್ಲಿ ಕಲಾತಂಡಗಳ ಪ್ರದರ್ಶನವೂ ಕೂಡ ಒಂದಾಗಿತ್ತು.ಕರ್ನಾಟಕ ಕಲಾ ಪ್ರದರ್ಶನ ರೂಪಿಸುವ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಾರುಡಿ ಬೊಂಬೆ ವೇಷ ಭೂಷಣವೂ ಎಲ್ಲರಿಗೂ ಅಚ್ಚುಮೆಚ್ಚು.ಮೈಸೂರು ದಸರಾ ಉತ್ಸವ 2023 ಕಲಾ ಪ್ರದರ್ಶನದ ಸ್ಪರ್ಧೆಯಲ್ಲಿ ರಮೇಶ್ ಬಿ. ಐ.ಪಿ.ಎಸ್. ಉಪ ವಿಶೇಷಾಧಿಕಾರಿಗಳು, ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಹಾಗೂ ಪೊಲೀಸ್ ಆಯುಕ್ತರು, ಮೈಸೂರು ನಗರದ ವತಿಯಿಂದ ದಸರಾ ಮಹೋತ್ಸವ 2023 ರ ಅಂಗವಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಲಾತಂಡಗಳಿಗೆ ಬಹುಮಾನ ಘೋಷಿಸಿದೆ.2023 ನ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ಅ.24 ರಂದು ನಡೆದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ತಂಡಗಳಲ್ಲಿ ಜಂಗಮಕೋಟೆಯ ಮಂಜುನಾಥ್ ಜೆ.ಎಂ ರವರ ಶ್ರೀ ನಂಜುಂಡೇಶ್ವರ ಗಾರುಡಿ ಗೊಂಬೆ ನೃತ್ಯ ಯುವಕರ ಸಂಘದ ಕಲಾತಂಡವೂ ಸಹ ಭಾಗವಹಿಸಲಾಗಿತ್ತು.
ಸುಮಾರು 40 ವರ್ಷಗಳಿಂದ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ಈ ಬಾರಿ ಸುಮಾರು 50 ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಜನ ಮನ್ನಣೆಯನ್ನು ಪಡೆದು, ಉತ್ತಮ ಪ್ರದರ್ಶನ ನೀಡಿದ ತಂಡವೆಂದು ತೃತೀಯ ಸ್ಥಾನ ಪಡೆದು 5 ಸಾವಿರ ರೂಪಾಯಿಗಳು ಬಹುಮಾನವಾಗಿ ಪಡೆದು ಶಿಡ್ಲಘಟ್ಟಕ್ಕೆ ಕೀರ್ತಿ ತಂದಿರುವುದು ಸಂತಸ ತಂದಿದೆ ಎಂದು ಜೆ.ಎಂ ಮಂಜುನಾಥ್ ತಿಳಿಸಿದರು.
ಜಂಗಮಕೋಟೆಯ ಗಾರುಡಿ ಮುನಿರಾಜು ಅವರ ಮಗ ಜೆ.ಎಂ ಮಂಜುನಾಥ್ ಅವರು ಸುಮಾರು ವರ್ಷಗಳಿಂದ ತಾತ ಮತ್ತು ತಂದೆಯೊಂದಿಗೆ ಬೊಂಬೆಗಳಿಗೆ ಬಣ್ಣ ಬಳಿಯುವುದು, ಬೊಂಬೆಗಳನ್ನು ತಯಾರಿಸುವುದು, ನೋಡುತ್ತಾ ಅದರೊಂದಿಗೆ ಹಾಡುತ್ತಾ, ಕುಣಿಯುತ್ತಾ ಬೆಳೆದು, ಇದೀಗ ವಿವಿಧ ಪ್ರಕಾರಗಳಲ್ಲಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡು ಅತ್ತುತ್ತಮ ಗಾರುಡಿ ಕಲಾವಿದರಾಗಿ ಗುರ್ತಿಸಿಕೊಂಡು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನಂಜುಂಡೇಶ್ವರ ಗಾರುಡಿ ಗೊಂಬೆ ನೃತ್ಯ ಯುವಕರ ಸಂಘದ ಕಲಾತಂಡವು ಮೈಸೂರು ದಸರಾದಲ್ಲಿ ಐದು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದು, ಈ ಬಾರಿ ಹೆಚ್ಚು ಶ್ರಮ ಪಟ್ಟು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಹೆಚ್ಚು ಆಸಕ್ತಿ ತೋರಿ ಪ್ರದರ್ಶನ ನೀಡಿದ್ದರಿಂದಲೇ ತೃತೀಯ ಬಹುಮಾನ ಪಡೆದಿರುವುದು ಸಂತಸ ತಂದಿದೆ. ಸರ್ಕಾರದಿಂದ ಆಯೋಜಿಸಿರುವ ಮೈಸೂರು ದಸರಾದಲ್ಲಿ ಪ್ರಶಸ್ತಿ ಪಡೆಯುವುದು ನನ್ನ ಕನಸಾಗಿತ್ತು.
