????????????

ಉದಯವಾಹಿನಿ ದೇವನಹಳ್ಳಿ: ಕನ್ನಡ ರಾಜ್ಯೋತ್ಸವ ಎಂಬುವುದು ಕನ್ನಡದ ಹಬ್ಬವಿದ್ದಂತ ಕರ್ನಾಟಕ ರಾಜ್ಯದ್ಯಾಂತ ಈ ಭಾರಿ ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಸಂತಸದ ಸುದ್ದಿ ಹಾಗೆ ಮೈಸೂರು ರಾಜ್ಯವು “ಕರ್ನಾಟಕ” ಎಂದು ಮರುನಾಮಕರಣಗೊಂಡು ಇಂದಿಗೆ 50 ವಸಂತಗಳು ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸಮಸ್ತ ಕನ್ನಡ ಬಾಂಧವರಿಗೆ ಹೃದಯ ಪೂರ್ವಕ ಶುಭಾಷಯಗಳನ್ನು ಕೋರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯಿತಿ ವತಿಯಿಂದ 68 ನೇ ಕನ್ನಡ ರಾಜ್ಯೋತ್ಸವನ್ನು ದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮವನ್ನು ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಇಂದು 68ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಹಬ್ಬವನ್ನಾಗಿ ನಾವೆಲ್ಲರೂ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ ಎಲ್ಲಾ ಪ್ರಮುಖರಿಗೆ ಅಭಿನಂದನೆಗಳು ಎಂದರು. ಈಗಿನ ಕರ್ನಾಟಕವು ಮೊದಲು ಮೈಸೂರು ರಾಜ್ಯವಾಗಿದ್ದು, 1956ರ ನವೆಂಬರ್ 1ರಂದು ಕರ್ನಾಟಕವೆಂದು ಹೆಸರಾಯಿತು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈಗ ಏಕೀಕೃತ ಕರ್ನಾಟಕವಾಗಿದೆ. ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಎಂ. ಶ್ರೀಕಂಠಯ್ಯ, ಎ.ಎನ್. ಕೃಷ್ಣ ರಾವ್ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕಿಕರಣಕ್ಕೆ ಕಾರಣರಾದವರು ಅವರೆಲ್ಲರನ್ನು ಇಂದು ಸ್ಮರಿಸುತ್ತಾ, ನಾವು ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರಾದರೆ ಸಾಲದು ಪ್ರತಿ ನಿತ್ಯ ನಾವು ಕನ್ನಡಿಗರಾಗಿರಬೇಕು ಪ್ರಪಂಚದ ಯಾವ ಮೂಲೆಯಲ್ಲಿ ನೆಲೆಸಿದರೂ ಸಹ ಕನ್ನಡ ಭಾಷೆಗೆ ಮೊದಲ ಅದ್ಯತೆಯನ್ನು ನೀಡಬೇಕು, ಕನ್ನಡವೇ ನಮ್ಮ ಉಸಿರಾಗಿರಬೇಕು, 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು ಮೈಸೂರು ರಾಜ್ಯವು ಈಗ ಚೆಲುವ ಕನ್ನಡ ನಾಡಾಗಿದೆ.
ನನ್ನ ಶಾಲೆ ನನ್ನ ಕೊಡುಗೆ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳ ಸಾಮಾನ್ಯ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್) ಸಹಭಾಗಿತ್ವದಲ್ಲಿ ಉನ್ನತೀಕರಿಸಿ, ಸಕಲ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಪ್ರದೇಶದ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡಲು, “ನನ್ನ ಶಾಲೆ ನನ್ನ ಕೊಡುಗೆ” ಕಾರ್ಯಕ್ರಮವನ್ನು ರಾಷ್ಟ್ರಪಿತ ಮಹಾತ್ಮಗಾಂಧಿಯವರ ಆಕ್ಟೋಬರ್-2ರ ಜನ್ಮದಿನದಂದು ದೇವನಹಳ್ಳಿ ತಾಲ್ಲೂಕು ವಿಶ್ವನಾಥಪುರ ಪಬ್ಲಿಕ್ ಶಾಲೆ ಆವರಣದಲ್ಲಿ ರೂ. 10.00 ಕೋಟಿ ವೆಚ್ಚದಲ್ಲಿ 5 ಶಾಲೆಗಳ ನವೀಕರಣಕ್ಕೆ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ರವರು ಭಾಗವಹಿಸಿ ಉದ್ಘಾಟಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1014 ಶಾಲೆಗಳಿದ್ದು, 115 ಶಿಥಿಲಗೊಂಡಿವೆ. 247 ಹೊಸ ಶಾಲೆಗಳ ನಿರ್ಮಾಣವಾಗಬೇಕು. ಇರುವ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಿಸಬೇಕು ಹಾಗೂ ಶೌಚಾಲಯ ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಂದಾಜು ರೂ. 70.00 ಕೋಟಿ ಅವಶ್ಯಕತೆ ಇರುತ್ತದೆ. ಈ ಸಂಬಂಧ ಎಲ್ಲಾ ತಾಲ್ಲೂಕಿನ ಶಾಸಕರುಗಳ ಜೊತೆ ಮಾತಾನಾಡಿದ್ದೇನೆ. ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರ ಜೊತೆ ಸಂಪರ್ಕ ಮಾಡಿ ಹಂತ ಹಂತವಾಗಿ ಅನುದಾನ ಪಡೆದು ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಾದರಿ ಶಾಲೆಗಳನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದೇನೆ.
ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು 5 ಗ್ಯಾರಂಟಿ ಗಳನ್ನು ಈಡೇರಿಸುತ್ತಿದ್ದು ಅನ್ನ ಭಾಗ್ಯ ಯೋಜನೆಯಡಿ ನಾವು 5ಕೆಜಿ ಅಕ್ಕಿ ಹಾಗೂ ಉಳಿದ 5ಕೆಜಿ ಅಕ್ಕಿಗೆ 170 ರೂಗಳನ್ನು ಪಡಿತರದಾರರ ಖಾತೆಗೆ ನೇರವಾಗಿ ಜಮಾ ಮಾಡುತ್ತಿದ್ದು ಕೆಲವೇ ದಿನಗಳಲ್ಲಿ 10 ಕೆಜಿ ಅಕ್ಕಿಯ ನ್ನು ಎಲ್ಲಾ ಜನರಿಗೆ ನೀಡುತ್ತೇನೆ ಎಂದರು.ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು, ಕಾನೂನು ಕ್ಷೇತ್ರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ್ ಸಾಲಿಯಾನ, ಸಮಾಜ ಸೇವೆಯಲ್ಲಿ ಕ್ಷೇತ್ರದಲ್ಲಿ ದೇವನಹಳ್ಳಿ ತಾಲ್ಲೂಕಿನ ಬಚ್ಚಹಳ್ಳಿ ಬಿ.ಕೆ.ನಾರಾಯಣ ಸ್ವಾಮಿ, ಶಿಕ್ಷಣ ಕ್ಷೇತ್ರದಲ್ಲಿ ಡಾ|| ಷಫಿ ಅಹಮದ್, ಕೃತಿ ಕ್ಷೇತ್ರದಲ್ಲಿ ಮರವೆ ನಾರಾಯಣಪ್ಪ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಳಾದ ಡಾ.ಶಿವಶಂಕರ್,ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಅನುರಾಧ, ಅಪಾರ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ದೇವನಹಳ್ಳಿ ತಾಲ್ಲೂಕು ತಹಶಿಲ್ದಾರ್ ಶಿವರಾಜ್, 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ನಾರಾಯಣಸ್ವಾಮಿ ಜಿಲ್ಲಾ ಕಸಾಪ ಅಧ್ಯಕ್ಷ ಕೃಷ್ಣಪ್ಪ, ಹಾಗೂ ಪೋಲೀಸ್ ಪೆರೇಡ್ ತಂಡಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
