ಉದಯವಾಹಿನಿ ಪಾವಗಡ: ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಕಂಕಣ ಬದ್ಧರಾಗಿ ನಿಲ್ಲಬೇಕಾಗಿರುವುದು ಅವಶ್ಯಕ ಎಂದು ಶಾಸಕ ಹೆಚ್.ವಿ.ವೆಂಕಟೇಶ್ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಚಲಿತ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ ಕನ್ನಡದ ಏಳಿಗೆ ಸಾಧ್ಯವಾಗುತ್ತದೆ. ಕನ್ನಡವನ್ನು ಹೆಚ್ಚು ಬಳಕೆ ಮಾಡುವ ಮೂಲಕ ಭಾಷೆಯ ಉಳಿವಿಗಾಗಿ ಎಲ್ಲರೂ ಮುಂದಾಗಬೇಕು.ನಾವು ಕನ್ನಡ ಉಳಿಸಿ ಬೆಳೆಸುವ ಜೊತೆಗೆ ಕರ್ನಾಟಕದಲ್ಲಿ ವಾಸವಾಗಿರುವ ಬೇರೆ ರಾಜ್ಯದ ಜನರಿಗೂ ಕನ್ನಡ ಕಲಿಸುವ ಮೂಲಕ ನಮ್ಮ ಭಾಷೆಯ ರಕ್ಷಣೆಗೆ ಮುಂದಾಗಬೇಕಿದೆ. ಆ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಬದ್ಧತೆಯನ್ನು ನಾವು ಮೆರೆಯಬೇಕಿದೆ ಎಂದರು. ತಹಶೀಲ್ದಾರ್ ಡಿ.ಎನ್.ವರದರಾಜು, ಕಸಾಪ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಮಾತನಾಡಿದರು.ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಂದಿ ಸಾಧಕರನ್ನು ಗುರ್ತಿಸಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ.ಇಒ ಕೆ.ಒ.ಜಾನಕಿರಾಮ್, ಮುಖ್ಯಾಧಿಕಾರಿ ಶಂಷುದ್ದೀನ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಗಳಾದ ಸುರೇಶ್.ಎಂ.ಆರ್, ಬಿ.ಸಿ.ಗಿರೀಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಎಇಇ ಟಿ.ಸುರೇಶ್, ಹಿರಿಯ ತೋಟಗಾರಿಕಾ ಅಧಿಕಾರಿ ವಿಶ್ವನಾಥ್.ವಿ.ಎಸ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಯ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್ ಕುಮಾರ್, ಬಿಇಒ ಇಂದ್ರಾಣಮ್ಮ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ.ಜಿ.ಇ. ಮತ್ತಿತರರು ಉಪಸ್ಥಿತರಿದ್ದರು.
ಕಾಟಾಚಾರಕ್ಕೆ ರಾಜ್ಯೋತ್ಸವ ಆಚರಣೆ; ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಆರೋಪ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ನೀಡಿದ ಸಲಹೆಗಳನ್ನು ಗಾಳಿಗೆ ತೂರಿ ಕೇವಲ ನಾಮಕಾವಸ್ಥೆಗೆ ಕಾರ್ಯಕ್ರಮ ಆಚರಣೆ ಮಾಡಿರುತ್ತಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪದೇ ಪದೇ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ. ಕರ್ನಾಟಕ ಎಂದು ರಾಜ್ಯಕ್ಕೆ ನಾಮಾಂಕಿತವಾಗಿ 50 ವರ್ಷ ಕಳೆದ ಹಿನ್ನೆಲೆ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕಿದ್ದ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ಆಚರಣೆ ಮಾಡಿ ನಾಡಹಬ್ಬಕ್ಕೆ ಅವಮಾನ ಮಾಡಿರುತ್ತಾರೆ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಎನ್.ಹೆಚ್.ಗೋವರ್ಧನ್ ಆರೋಪಿಸಿದ್ದಾರೆ.
