
ಉದಯವಾಹಿನಿ ದೇವರಹಿಪ್ಪರಗಿ:ಜಾನುವಾರುಗಳಲ್ಲಿ ಎದುರಾಗುವ ಅರೋಗ್ಯ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ, ಮೂಕ ರೋಧನೆ ತಪ್ಪಿಸಲು ಸರ್ಕಾರ ಜಾರಿಗೊಳಿಸಿರುವ “ಪಶು ಸಂಜೀವಿನಿ’ ಸೇವೆಯ ಸದುಪಯೋಗಪಡಿಸಿಕೊಳ್ಳಲು ರೈತರಿಗೆ ಕರೆ ನೀಡಿದ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ.ಪಟ್ಟಣದಲ್ಲಿ ಬುಧವಾರದಂದು ಪಶು ಆಸ್ಪತ್ರೆಯ ಆವರಣದಲ್ಲಿ 2022-23 ನೇ ಸಾಲಿನ ಪಶುಪಾಲನ ಮತ್ತು ವೈದ್ಯ ಸೇವಾ ಇಲಾಖೆ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ರೂ ವೆಚ್ಚದ ಪಶು ವೈದ್ಯಕೀಯ ಆಸ್ಪತ್ರೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು, ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಇದ್ದು ನೀರಿನ ಸಮಸ್ಯೆ ಪರಿಹರಿಸಲು, ಜಾನುವಾರಗಳಿಗೆ ಸೂಕ್ತ ಮೇವಿನ ಸಂಗ್ರಹ, ಬರ ನಿರ್ವಹಣೆ ಮಾಡಲು ಹಾಗೂ ಕಟ್ಟಡದ ಕಾಮಗಾರಿ ಅಚ್ಚುಕಟ್ಟಾಗಿ ಗುಣಮಟ್ಟದಿಂದ ಕೂಡಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಶುಪಾಲನ ಇಲಾಖೆಯ ಡಿಡಿ ಅಶೋಕ ಘೋಣಸಗಿ ಮಾತನಾಡಿ, ಇಲಾಖೆ ವತಿಯಿಂದ ಪ್ರಾಣಿಗಳಿಗೆ ಔಷಧಗಳ ಕೊರತೆ ಆಗದ ಹಾಗೆ ನೋಡಿಕೊಳ್ಳುತ್ತಿದ್ದು, ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದರೂ ರೈತರಿಗೆ ಸಮಸ್ಯೆ ಆಗದ ರೀತಿ ಕೆಲಸ ನಿರ್ವಹಿಸುತ್ತಿದ್ದೇವೆ, ಬರ ನಿರ್ವಹಣೆ ಕುರಿತು ತರಬೇತಿ ಕೊಡಲಾಗಿದ್ದು ನೀರಿನ ಲಭ್ಯತೆ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ್ ಪ್ರಕಾಶ ಸಿಂದಗಿ ಮಾತನಾಡಿ ಬರಗಾಲ ಘೋಷಣೆ ಆಗಿದ್ದರಿಂದ ನಮ್ಮ ತಾಲೂಕಿನಲ್ಲಿ ಡಿಸೆಂಬರ್ ತಿಂಗಳ ವರೆಗೆ ನೀರಿನ ಲಭ್ಯತೆ ಇದ್ದು, ನೀರಿನ ಸಮಸ್ಯೆ ಆಗದ ರೀತಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಭಾರತಿ ಚೆಲುವಯ್ಯ, ಜಿಲ್ಲಾ ಜೆಡಿಎಸ್ ಪಕ್ಷದ ಉಪಾಧ್ಯಕ್ಷ ರಿಯಾಜ್ ಯಲಗಾರ, ಪ ಪಂ ಸದಸ್ಯರುಗಳಾದ ಶಾಂತಯ್ಯ ಜಡಿಮಠ, ಸಿಂಧೂರ ಡಾಲೇರ, ಸುಮಂಗಲಾ ಸೇಬೆನ್ನವರ, ಮುಖಂಡರುಗಳಾದ ಚನ್ನವೀರಪ್ಪ ಕುದುರಿ, ಭಾಸ್ಕರ ಗುಡಿಮನಿ, ಗುರುರಾಜ ಆಕಳವಾಡಿ,ಮುನೀರ್ ಅಹ್ಮದ್ ಮಳಖೇಡ, ವೀರೇಶ ಕುದುರಿ, ಮಾಂತೇಶ ವಂದಾಲ, ವಿನೋದಗೌಡ ಪಾಟೀಲ, ಹಣಮಂತ ತಾಂಬೆ, ರಾಘವೇಂದ್ರ ಗುಡಿಮನಿ, ರೈತ ಮುಖಂಡರುಗಳಾದ ಸಿದ್ದನಗೌಡ ಜಲಪುರ, ಶಂಕರಗೌಡ ಹಿರೇಗೌಡ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
