ಉದಯವಾಹಿನಿ, ವಿಜಯಪುರ: ಪಟ್ಟಣದ ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲ. ಅಲ್ಲದೆ, ಮೂಲಸೌಕರ್ಯಗಳಿಂದ ಪರದಾಡುತ್ತಿದ್ದಾರೆ.ಕೇವಲ 4 ಕೊಠಡಿಗಳಿವೆ. ಮುಖ್ಯ ಶಿಕ್ಷಕರು ಸೇರಿ 3 ಮಂದಿ ಶಿಕ್ಷಕರಿದ್ದಾರೆ. ಇಲ್ಲಿ ದಾಖಲಾಗಿರುವ ಬಹುತೇಕ ಮಕ್ಕಳು ಪರಿಶಿಷ್ಟರು, ಅಲ್ಪಸಂಖ್ಯಾತರು. ಇಲ್ಲಿನ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ. ಸುಸಜ್ಜಿತವಾದ ಶೌಚಾಲಯಗಳಿಲ್ಲ. ಹಳೆ ಶೌಚಾಲಯಗಳನ್ನೇ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕುಳಿತುಕೊಳ್ಳಲು ಡೆಸ್ಕ್‌ಗಳಿಲ್ಲ. 6 ಮತ್ತು 7ನೇ ತರಗತಿ ಮಕ್ಕಳಿಗೆ ಮಾತ್ರವೇ ಡೆಸ್ಕ್‌ಗಳಿವೆ. ಉಳಿದ ಮಕ್ಕಳು ನಲಿ-ಕಲಿ ಮಕ್ಕಳಿಗಾಗಿ ಇಟ್ಟಿರುವ ಆಸನಗಳಲ್ಲೇ ಕುಳಿತುಕೊಳ್ಳುತ್ತಾರೆ.
ಶಾಲೆ ಕಟ್ಟಡದ ಪಕ್ಕದಲ್ಲೇ ವಾಸದ ಮನೆಗಳಿರುವುದರಿಂದ ಜನರ ಗಲಾಟೆ, ಗಲಿಬಿಲಿಯಿಂದಾಗಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಯುವುದಕ್ಕೆ ಸಾಧ್ಯವಿಲ್ಲದ ವಾತಾವರಣವಿದೆ. ಶಾಲೆ ಎದುರಿನಲ್ಲಿ ರೇಷ್ಮೆ ನೂಲುಬಿಚ್ಚಾಣಿಕೆ ಘಟಕವಿದೆ. ಅಲ್ಲಿ ನೂಲು ಬಿಚ್ಚಾಣಿಕೆ ಮಾಡುವ ಕಾರ್ಮಿಕರು, ನಿರಂತರವಾಗಿ ಕೆಲಸ ಮಾಡುತ್ತಿರುತ್ತಾರೆ. ಕೆಲಸ ಮಾಡುವಾಗ ಸಮಯ ಕಳೆಯಲು ಸೌಂಡ್ ಸಿಸ್ಟಂ ಉಪಯೋಗ ಮಾಡುತ್ತಿರುವುದರಿಂದ ಶಬ್ದಮಾಲಿನ್ಯ ನಡುವೆ ವಿದ್ಯಾರ್ಥಿಗಳಲ್ಲಿ ಕಲಿಕೆ ಏಕಾಗ್ರತೆ ಮೂಡಿಸಲು ಶಿಕ್ಷಕರು ಹೆಣಗಾಡುತ್ತಿದ್ದಾರೆ.
