ಉದಯವಾಹಿನಿ, ದೇವರಹಿಪ್ಪರಗಿ: ತಾಲೂಕಿನ ಚಟ್ನಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯ ಮಾರಾಟವಾಗುತ್ತಿರುವುದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಇಲ್ಲದಂತಾಗಿದೆ ಎಂದು ಪ್ರತಿಭಟಿಸಿ ಶುಕ್ರವಾರದಂದು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಅವರ ಪರವಾಗಿ ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು, ನಂತರ ಗ್ರಾಮದ ಯುವ ಮುಖಂಡ ಶರಣಗೌಡ ಪಾಟೀಲ,ದಲಿತ ಪರ ಸಂಘಟನೆಯ ಮುಖಂಡ ರಾವುತ್ ತಳಕೇರಿ, ಹಾಗೂ ಮಹಿಳೆಯರ ಮಾತನಾಡಿ, ಗ್ರಾಮದಲ್ಲಿ ಸಂಜೆಯಿಂದ ರಾತ್ರಿವರೆಗೆ ಕುಡುಕರ ಹಾವಳಿ ಹೆಚ್ಚಾಗಿದ್ದು ಮಹಿಳೆಯರು ಮಕ್ಕಳು ನೆಮ್ಮದಿಯಿಂದ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ, ಹೀಗಾಗಿ ಗ್ರಾಮಸ್ಥರೆಲ್ಲರೂ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮ ಮಾಡಲು ನಿರ್ಧರಿಸಿ ಮನವಿ ಸಲ್ಲಿಸಲಾಗಿದೆ,ಗ್ರಾಮದ ಕಿರಾಣಿ ಚಹಾ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದ್ದು, ಸಂಬಂಧಪಟ್ಟ ಅಬಕಾರಿ ಇಲಾಖೆ ಕಂಡೂ ಕಾಣದಂತಿದ್ದು ಬೇಜಾವಾಬ್ದಾರಿಯಿಂದ ಗ್ರಾಮದಿಂದ ನಿತ್ಯ ತಂಟೆಗಳಾಗುತ್ತಿವೆ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಿಂಗಳ ವಸೂಲಿಗಾಗಿ ಬರುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮದ್ಯ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ವಸಹಾಯ ಮಹಿಳಾ ಸಂಘ,ಕರ್ನಾಟಕ ಅಂಬೇಡ್ಕರ ಸೇನೆ,ಗ್ರಾಮ ಪಂಚಾಯತಿ ಸದಸ್ಯರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ತನುಶ್ರೀ ಶರಣಗೌಡ ಪಾಟೀಲ, ಅಂಬೇಡ್ಕರ್ ಸೇನೆ ಸಮಿತಿಯ ಅಧ್ಯಕ್ಷ ರಮೇಶ ಚಲವಾದಿ,ಮುಖಂಡರಾದ ಬೈರಡ್ಡಿ ಹದನೂರ, ಶಂಕರಲಿಂಗ ಪೂಜಾರಿ, ಸಂಜು ಪೂಜಾರಿ ಸೇರಿದಂತೆ ಗ್ರಾಮದ ಪ್ರಮುಖರು, ಯುವಕರು, ಮಹಿಳೆಯರು,ಕರ್ನಾಟಕ ಅಂಬೇಡ್ಕರ್ ಸೇನೆ ಸಮಿತಿಯ ಪದಾಧಿಕಾರಿಗಳು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!