
ಉದಯವಾಹಿನಿ, ಔರಾದ್ : ಎಚ್‌ಐವಿ, ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಪಣ ತೊಡಿ. ಎಚ್‌ಐವಿ ಪೀಡಿತರನ್ನು ಗೌರವಿಸಿ, ಮಾರಕ ರೋಗಗಳ ಬಗ್ಗೆ ಎಚ್ಚರಿಕೆ ಇರಲಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ಹೇಳಿದರು.ತಾಲೂಕಿನ ಸಂತಪೂರ ಗ್ರಾಪಂ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟವ ಘಟಕ, ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಪಂ ಸದಸ್ಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಚ್‌ಐವಿ ಏಡ್ಸ್ ಕುರಿತು ಸಂಪೂರ್ಣ ಮಾಹಿತಿ ಪಡೆದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ಸದೃಢ ಸಮಾಜ ಕಟ್ಟುವಂತೆ ಯುವ ಜನತೆಗೆ ಕರೆ ನೀಡಿದರು. ಯುವಜನತೆಗೆ ಎಚ್‌ಐವಿ ಹರಡದಂತೆ ಕ್ರಮ ತಿಳಿಸುವುದರ ಜೊತೆಗೆ ಸೋಂಕಿತರನ್ನು ಕಳಂಕ ತಾರತಮ್ಯದಿಂದ ನೋಡದೆ ಸಹಾನುಭೂತಿಯಿಂದ ಕಾಣಬೇಕು ಎಂದರು.ಸಂತಪುರ್ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿಯ ಕೌನ್ಸಿಲರ್ ಸುನೀತಾ ಮಾತನಾಡಿ, ಏಡ್ಸ್ ರೋಗದ ಬಗ್ಗೆ ಇಂದಿಗೂ ಜನರಲ್ಲಿ ಪೂರ್ಣ ಪ್ರಮಾಣದ ಅರಿವಿನ ಕೊರತೆಯಿದೆ. ಯುವ ಜನತೆ ವೈದ್ಯರ ಸಲಹೆ ಪಡೆದು ಏಡ್ಸ್‌ನಿಂದ ಉಂಟಾಗುವ ದುಷ್ಪರಿಣಾಮ ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಬೇಕು ಎಂದರು.
ಎಲ್ಬಿಎಸ್ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಆನಂದ ಪೌಲ ಮಾತನಾಡಿ, ಏಡ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸಮಾಜದ ಜನರು ಸಂಕಲ್ಪ ಮಾಡಬೇಕು. ಏಡ್ಸನಿಂದ ಬಳಲುವ ರೋಗಿಗಳಿಗೆ ಔಷಧೋಪಚಾರ ಒದಗಿಸಿ, ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಆನಂದ, ಅಶೋಕ ಪಾಂಚಾಳ, ಚಂದ್ರಕಾಂತ ಪಾಟೀಲ, ಕಾರ್ತಿಕ ಸ್ವಾಮಿ, ಅನೀಲರೆಡ್ಡಿ ದೂಂಗಾಲೆ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.
